ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಹಾಯಕ ಕಾನೂನು ಅಧಿಕಾರಿಯ ನೇಮಕಾತಿಗೆ ಸಂಬಂಧಿಸಿದ ಕನ್ನಡ ಭಾಷಾ ಅರ್ಹತೆ ವಿವಾದವನ್ನು ‘ವಾಯ್ಸ್ ಆಫ್ ಪಬ್ಲಿಕ್ ಮೀಡಿಯಾ’ ಸೆಪ್ಟೆಂಬರ್ 5ರಂದು ಮೊದಲಾಗಿ ಬಹಿರಂಗಪಡಿಸಿತ್ತು. ಕನ್ನಡ ಓದಲು–ಬರೆಯಲು ಬಾರದ ಅಭ್ಯರ್ಥಿಯನ್ನು ಕಾನೂನು ಹುದ್ದೆಗೆ ನೇಮಿಸಲು ನಡೆದ ಪ್ರಯತ್ನದ ಹಿಂದೆ ರಾಜಕೀಯ ಒತ್ತಡವಿದೆ ಎಂಬ ಅಂಶವನ್ನೂ ಮಾಧ್ಯಮ ಸ್ಪಷ್ಟವಾಗಿ ಓದುಗರ ಮುಂದಿಟ್ಟಿತ್ತು.

ಈ ವರದಿಗೆ ಫಲಶ್ರುತಿಯಾಗಿ, ಸಂಬಂಧಿತ ಸಲಹೆಗಾರರನ್ನು ಕರ್ತವ್ಯದಿಂದ ತೆರವುಗೊಳಿಸುವಂತೆ ಪಾಲಿಕೆ ಆಡಳಿತಾಧಿಕಾರಿ ಮಹಾನಗರ ಪಾಲಿಕೆ ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ ಎಂಬುದು ಇದೀಗ ಬಹಿರಂಗವಾಗಿದೆ. ‘ವಾಯ್ಸ್ ಆಫ್ ಪಬ್ಲಿಕ್’ನಲ್ಲಿ ವರದಿ ಪ್ರಕಟವಾದ ಬಳಿಕ, ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು, ಕನ್ನಡ ಭಾಷಾ ಜ್ಞಾನವಿಲ್ಲದಿದ್ದರೂ ಹೆಚ್ಚಿನ ಅಂಕ ನೀಡಿ ಹುದ್ದೆಗೆ ಆಯ್ಕೆ ಮಾಡಿರುವುದು ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ ಎಂಬ ಅಂಶಗಳು ಗಮನಕ್ಕೆ ಬಂದಿದ್ದವು.
ಸೆಪ್ಟೆಂಬರ್ 5ರ ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಕನ್ನಡ ಹಾಗೂ ತುಳುಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಪರಿಣಾಮವಾಗಿ ವಿಷಯವು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿ, ಮಂಗಳೂರು ಮಹಾನಗರ ಪಾಲಿಕೆಯ ನೇಮಕಾತಿ ಪ್ರಕ್ರಿಯೆ, ನಿಯಮ ಉಲ್ಲಂಘನೆ ಹಾಗೂ ಕನ್ನಡ ಭಾಷಾ ಅರ್ಹತೆ ವಿಚಾರ ಪ್ರಮುಖವಾಗಿ ಚರ್ಚೆಗೆ ಬಂದಿತು.
ಕರ್ನಾಟಕ ನಾಗರಿಕ ಸೇವಾ ನಿಯಮಗಳು (KCSR–1974) ಪ್ರಕಾರ ಕನ್ನಡ ಭಾಷಾ ಅರ್ಹತೆ ಕಡ್ಡಾಯ ಎಂಬ ಅಂಶವನ್ನು ‘ವಾಯ್ಸ್ ಆಫ್ ಪಬ್ಲಿಕ್ ಮೀಡಿಯಾ’ ಮೊದಲಿನಿಂದಲೇ ಒತ್ತಿ ಹೇಳುತ್ತಾ ಬಂದಿದ್ದು, ಈ ವರದಿ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ನಿಯಮಾನುಸರಣೆ ಅಗತ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಮಂಗಳೂರು ಪಾಲಿಕೆಯಲ್ಲಿ ಕನ್ನಡ ಬರೆಯಲು ಬಾರದ ಅಧಿಕಾರಿ! ಕನ್ನಡಪರ ಸಂಘಟನೆಗಳ ಕಿಡಿ!!