ಪತ್ತನಂತಿಟ್ಟ: ಶಬರಿಮಲೆ ಯಾತ್ರಿಕರ ಆತಂಕಕ್ಕೆ ಕಾರಣವಾಗಿದ್ದ ಹುಲಿಯೊಂದು ರನ್ನಿ ಅರಣ್ಯ ವಿಭಾಗದ ವಡಶೇರಿಕ್ಕರ ವ್ಯಾಪ್ತಿಯ ಕುಂಬಳತ್ತಮ್ಮನ್‌ನಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿದ್ದ ಬೋನಿಗೆ ಬಿದ್ದಿದ್ದು, ಅದೀಗ ಚೇತರಿಸಿಕೊಳ್ಳುತ್ತಿದೆ. ಹುಲಿ ತ್ರಿಶೂರ್‌ನ ಪುತ್ತೂರಿನ ವನ್ಯಜೀವಿ ಉದ್ಯಾನವನದಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಬೋನಿನಲ್ಲಿ ಹುಲಿ ಸಿಲುಕಿರುವುದು ಪತ್ತೆಯಾಗಿದೆ. ಪಶುವೈದ್ಯರು ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ, ಹುಲಿಯ ದೇಹದ ಮೇಲೆ ಗಾಯಗಳು, ದೃಷ್ಟಿ ಮಂದತೆ ಹಾಗೂ ಆರೋಗ್ಯ ಸ್ಥಿತಿ ಕಳಪೆಯಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹುಲಿಯನ್ನು ಒಳಗಿನ ಕಾಡಿಗೆ ಬಿಡುವ ಬದಲು, ತ್ರಿಶೂರ್‌ನ ಪುತ್ತೂರಿನ ವನ್ಯಜೀವ ಉದ್ಯಾನವನಕ್ಕೆ ಸ್ಥಳಾಂತರಿಸುವಂತೆ ಅರಣ್ಯ ಇಲಾಖೆ ನಿರ್ಧರಿಸಿತು. ಕಾಡಿಗೆ ಬಿಟ್ಟರೆ ಆಹಾರ ಹಾಗೂ ಬೇಟೆ ಹುಡುಕುವುದು ಹುಲಿಗೆ ಕಷ್ಟಕರವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಹಗಲಿನ ಬಿಸಿಲನ್ನು ತಪ್ಪಿಸಲು ಸೋಮವಾರ ರಾತ್ರಿ ವಿಶೇಷವಾಗಿ ಸುಸಜ್ಜಿತ ವಾಹನದಲ್ಲಿ ಹುಲಿಯನ್ನು ತ್ರಿಶೂರ್‌ಗೆ ಕರೆದೊಯ್ಯಲಾಗಿದ್ದು, ತಂಡವು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಪುತ್ತೂರು ತಲುಪಿತು. ಹುಲಿಯನ್ನು ಅಲ್ಲಿನ ವಿಶೇಷ ಬೋನಿಗೆ ಸ್ಥಳಾಂತರಿಸಲಾಗಿದ್ದು, ಪಶುವೈದ್ಯರ ನಿಗಾ ಹಾಗೂ ಚಿಕಿತ್ಸೆಯಲ್ಲಿದೆ ಎಂದು ರನ್ನಿ ಡಿಎಫ್‌ಒ ಎನ್. ರಾಜೇಶ್ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ರನ್ನಿ ಎಸಿಎಫ್ ಎಂ.ಎಸ್. ಸೂರಜ್, ವಡಶೇರಿಕ್ಕರ ರೇಂಜ್ ಆಫೀಸರ್ ಜಿ.ಎಸ್. ರಂಜಿತ್, ತನ್ನಿಥೋಡು ಡೆಪ್ಯೂಟಿ ರೇಂಜರ್ ವಿಜೇಶ್ ಆಚಾರಿ, ಕೊನ್ನಿ ಸಹಾಯಕ ಅರಣ್ಯ ಪಶುವೈದ್ಯಕೀಯ ಶಸ್ತ್ರಚಿಕಿತ್ಸಕ ಡಾ. ಜೈಸ್ ಮಾನ್ ಹಾಗೂ ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಪಡೆ ಸೇರಿ 20ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು. ದಾರಿಯುದ್ದಕ್ಕೂ ಹುಲಿಗೆ ಆಹಾರ ಹಾಗೂ ಔಷಧೋಪಚಾರಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿತ್ತು.