ಮಂಗಳೂರು: ಮೂಲತಃ ದಕ್ಷಿಣ ಕನ್ನಡದವರು, ಪ್ರಸ್ತುತ ಮುಂಬಯಿಯಲ್ಲಿ ವೈದ್ಯೆ ಆಗಿರುವ ತುಳುನಾಡಿನ ಹುಡುಗಿ ಡಾ. ರಶ್ಮಾ ಎಂ. ಶೆಟ್ಟಿ ಅವರು ದೇಶದ ಪ್ರತಿಷ್ಠಿತ “ಮಿಸೆಸ್ ಇಂಡಿಯಾ – ಸೀಸನ್ 15” ಕಿರೀಟವನ್ನು ಮುಡಿಗೇರಿಸಿಕೊಂಡು ರಾಜ್ಯದ ಹೆಮ್ಮೆಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಡಿಸೆಂಬರ್ 18 ರಿಂದ 21 ರವರೆಗೆ ಜೈಪುರದ ಜೈಬಾಗ್ ಪ್ಯಾಲೇಸ್‌ನಲ್ಲಿ ದೀಪಾಳಿ ಫಡ್ನಿಸ್ ನೇತೃತ್ವದಲ್ಲಿ ನಡೆದ ಅಂತಿಮ ಸ್ಪರ್ಧೆಯಲ್ಲಿ ಅವರು ಈ ಕಿರೀಟ ಗೆದ್ದಿದ್ದಾರೆ. ದೇಶದ ನಾನಾ ಭಾಗಗಳಿಂದ ಆಯ್ಕೆಯಾದ 40 ಸ್ಪರ್ಧಿಗಳ ನಡುವೆ ನಡೆದ ಈ ಹಣಾಹಣಿಯಲ್ಲಿ ಪ್ರತಿಭಾ ಪ್ರದರ್ಶನ, ಪ್ರೇರಣಾದಾಯಕ ಜೀವನಕಥೆ, ವೈಯಕ್ತಿಕ ಸಂದರ್ಶನ, ರ್ಯಾಂಪ್‌ವಾಕ್, ರಾಷ್ಟ್ರೀಯ ವೇಷಭೂಷಣ, ಸಾಂಪ್ರದಾಯಿಕ ಸುತ್ತು ಹಾಗೂ ಈವಿನಿಂಗ್ ಗೌನ್ ಪ್ರದರ್ಶನದ ಮೂಲಕ ಸ್ಪರ್ಧಿಗಳನ್ನು ಮೌಲ್ಯಮಾಪನ ಮಾಡಲಾಯಿತು.
ಡಾ. ರಶ್ಮಾ ಶೆಟ್ಟಿ ಅವರ ಸಾಧನೆಗಳು:
ಮಿಸೆಸ್ ಇಂಡಿಯಾ ಕರ್ನಾಟಕ 2024 ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್ ಪ್ರಶಸ್ತಿ.
ಟ್ಯಾಲೆಂಟ್ ರೌಂಡ್, ರ್ಯಾಂಪ್‌ವಾಕ್, ಶಾರ್ಟ್ ಫಿಲ್ಮ್ ವಿಭಾಗಗಳಲ್ಲಿ ಹಲವು ಪ್ರಶಸ್ತಿಗಳು.
ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಸ್ಪರ್ಧೆ (ಕದ್ರಿ ಪಾರ್ಕ್) – ಪ್ರಥಮ ರನ್ನರ್ ಅಪ್.
ಆಕಾಂಕ್ಷ ಮಿಸೆಸ್ ಬಂಟ್ಸ್ 2023 (ಬಂಟರ ಸಂಘ, ಮುಂಬಯಿ) – ಪ್ರಥಮ ರನ್ನರ್ ಅಪ್.
ಡಾ. ರಶ್ಮಾ ಪುತ್ತೂರಿನ ನಾರ್ಯಗುತ್ತು ರಘುನಾಥ ಶೆಟ್ಟಿ ಮತ್ತು ಅಮ್ಟೂರು ಬಾಳಿಕೆ ಕಸ್ತೂರಿ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದು, ಮುಂಬಯಿಯ ವೈದ್ಯ ಮೋಹಿತ್ ಶೆಟ್ಟಿಯವರ ಪತ್ನಿ ಹಾಗೂ ಏಳು ವರ್ಷದ ಮಗಳ ತಾಯಿ. ಪುತ್ತೂರಿನ ಮುಂಡೂರು ಗ್ರಾಮದಲ್ಲಿ ಬೆಳೆದ ಇವರು ಪಾಪೆಮಜಲು ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕೊಂಬೆಟ್ಟು ಕಾಲೇಜಿನಲ್ಲಿ ಪಿಯು ಹಾಗೂ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪ್ರಕೃತಿ ಚಿಕಿತ್ಸೆ ಪದವಿ ಪಡೆದು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯಲ್ಲಿ ಎರಡನೇ ಸ್ಥಾನ ಪಡೆದು ಕೀರ್ತಿ ಗಳಿಸಿದ್ದಾರೆ.

ಬಹುಮುಖ ಪ್ರತಿಭೆ:
ವೈದ್ಯಕೀಯ ಸೇವೆಯ ಜೊತೆಗೆ ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವ ಇವರು, ಮುಲುಂಡ್ ಹಿಲ್ಸ್ ಇನ್ನರ್ ವೀಲ್ ಕ್ಲಬ್‌ನ ಕಾರ್ಯದರ್ಶಿಯಾಗಿ ಮಹಿಳಾ ಆರೋಗ್ಯ ಕುರಿತಂತೆ ಅನೇಕ ಲೈವ್ ಸೆಮಿನಾರ್‌ಗಳನ್ನು ನಡೆಸಿದ್ದಾರೆ. ನವಿ ಮುಂಬಯಿಯ ಡಾ. ಡಿವೈ ಪಾಟೀಲ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಲಾ ಕ್ಷೇತ್ರದಲ್ಲೂ ಪ್ರಭಾವ:
ಡಾ. ರಶ್ಮಾ ಅವರು ಅಭಿನಯಿಸಿದ್ದ “ಸ್ವಾಮಿ ಕೊರಗಜ್ಜ” ನಾಟಕದಲ್ಲಿ ತಮ್ಮ ಶ್ರೇಷ್ಠ ಅಭಿನಯಕ್ಕಾಗಿ ಡಾ. ಶಿವರಾಮ ಕಾರಂತ ನಾಟಕೋತ್ಸವ -2024 ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಇವರ ಸಾಧನೆ ಮಹಿಳಾ ಸಬಲತೆಯ ಚಿತ್ರೀಕರಣವಷ್ಟೇ ಅಲ್ಲ, ಗ್ರಾಮೀಣ ಹಿನ್ನೆಲೆಯ ಹೆಣ್ಣುಮಕ್ಕಳು ಗುರಿಯನ್ನು ಹೊಂದಿದರೆ ಎಷ್ಟೇ ಉನ್ನತ ಶಿಖರವನ್ನು ತಲುಪಬಹುದೆಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.