ಬಂಟ್ವಾಳ: ಹೆಂಚಿನ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಪೂರ್ತಿ ಮನೆ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ಮೌಲ್ಯದ ವಸ್ತು ನಷ್ಟ ಸಂಭವಿಸಿದ ಘಟನೆ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆದಿದೆ.

ಕಲ್ಲಡ್ಕ ಸಮೀಪದ ವೀರಕಂಭ ಗ್ರಾಮದ ಗಣೇಶ್ ಕೋಡಿ ನಿವಾಸಿ ರಾಜೇಶ್ವರಿ ಎಂಬವರ ಮನೆಗೆ ಬೆಂಕಿ ಬಿದ್ದಿದ್ದು, ಮನೆಯೊಳಗಿದ್ದ ಬೆಲೆಬಾಳುವ ವಸ್ತುಗಳು, ಮನೆಯ ಸಂಬಂಧಿಸಿದ ಅಗತ್ಯ ದಾಖಲೆಗಳು ,ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

ರಾಜೇಶ್ವರಿ ಹಾಗೂ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಮಕ್ಕಳು ಶಾಲೆಗೆ ತೆರಳಿದ್ದು, ರಾಜೇಶ್ವರಿ ಅವರು ಕಲ್ಲಡ್ಕಕ್ಕೆ ಕೆಲಸಕ್ಕೆ ತೆರಳಿದ್ದರು. ಬೆಳಗ್ಗೆ ಸುಮಾರು 11 ಗಂಟೆ ವೇಳೆ ಇದ್ದಕ್ಕಿದ್ದಂತೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೆರೆಮನೆಯವರು ಹೊಗೆ ಬರುವುದನ್ನು ನೋಡಿದಾಗ ಮನೆಗೆ ಬೆಂಕಿ ಆವರಿಸಿಕೊಂಡಿತ್ತು.

ಕೂಡಲೇ ಮನೆಯವರಿಗೆ ವಿಷಯ ಮುಟ್ಟಿಸಿ, ಅವರು ಪಂಪ್ ಮೂಲಕ ನೀರು ಹಾಕಿ ಬೆಂಕಿಯನ್ನು ನಂದಿಸಲು ಹರಸಾಹಸ ಮಾಡಿದ್ದಾರೆ. ಆದರೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ. ವಿದ್ಯುತ್ ಮೀಟರ್ ಬೋರ್ಡ್ ನಿಂದ ಶಾರ್ಟ್ ಸರ್ಕ್ಯೂಟ್ ಆಗಿ ಈ ದುರ್ಘಟನೆ ನಡೆದಿರಬಹುದೆಂದು ಹೇಳಲಾಗುತ್ತಿದ್ದು, ಸ್ಪಷ್ಟವಾದ ಕಾರಣ ಇನ್ನಷ್ಟೇ ತಿಳಿಯಬೇಕಾಗಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಕಂದಾಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.