
ಮುಂಬೈ: ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ಮನೋರ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಅಂತರಾಷ್ಟ್ರೀಯ ಶೂಟರ್ ಸಂಭಾಜಿ ಪಾಟೀಲ್ (27) ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಂಭಾಜಿ ಪಾಟೀಲ್ ಅವರು ತಮ್ಮ ಟೊಯೋಟಾ ಫಾರ್ಚೂನರ್ ಕಾರಿನಲ್ಲಿ ಪುಣೆಯಿಂದ ಗುಜರಾತ್‌ಗೆ ಶೂಟಿಂಗ್ ತರಬೇತಿಗಾಗಿ ತೆರಳುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಲಾರಿಯೊಂದಕ್ಕೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಫಾರ್ಚೂನರ್ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಲಾರಿಯ ಅಡಿಗೆ ಸಿಲುಕಿಕೊಂಡಿತ್ತು.
ಅಪಘಾತದ ಸಮಯದಲ್ಲಿ ಕಾರಿನಲ್ಲಿ ಸಂಭಾಜಿ ಅವರೊಂದಿಗೆ ಇದ್ದ ಮತ್ತೊಬ್ಬ ಶೂಟರ್ ಯಶ್ ಚೌಧರಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂತರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ (ISSF) ಪ್ರಕಾರ, ಅವರು ಖ್ಯಾತ ಶೂಟರ್ ಜಸ್ಪಾಲ್ ರಾಣಾ ಅವರ ಬಳಿ ಸಂಭಾಜಿ ತರಬೇತಿ ಪಡೆಯುತ್ತಿದ್ದರು. ಕ್ರೀಡಾಪಟುವಷ್ಟೇ ಅಲ್ಲದೆ, ಪುಣೆಯ ಬಾಲೆವಾಡಿ ಕ್ರೀಡಾ ಸಂಕೀರ್ಣದಲ್ಲಿ ಕ್ರೀಡಾ ಅಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು.