ಯಾದಗಿರಿ: ಮದ್ಯ ಅನ್ನೋದು ಕೇವಲ ಮನುಷ್ಯನ ಲಿವರ್ ಅನ್ನಷ್ಟೇ ಅಲ್ಲ, ಆತನೊಳಗಿನ ಮನುಷ್ಯತ್ವವನ್ನೇ ಸುಟ್ಟು ಭಸ್ಮ ಮಾಡುತ್ತೆ ಅನ್ನೋದಕ್ಕೆ ಯಾದಗಿರಿಯ ಈ ಘಟನೆಗಿಂತ ದೊಡ್ಡ ಉದಾಹರಣೆ ಬೇಕಿಲ್ಲ. ತಾನು ಕುಡಿಯೋದನ್ನ ಬಿಡು ಅಂದಿದ್ದಕ್ಕೆ, ಮಗಳನ್ನೇ ಕೊಂದ ಈ ʻತಾಯಿ’ ಹೆಸರಿನ ರಾಕ್ಷಸಿಯ ಕಥೆ ಕೇಳಿದರೆ ಕಲ್ಲು ಮನಸ್ಸಿನವರಿಗೂ ಕಣ್ಣೀರು ಬರುತ್ತೆ.

“ಅಮ್ಮಾ ಕುಡಿಬೇಡಮ್ಮಾ…” ಅಂದದ್ದೇ ತಪ್ಪಾ?
ಆ 11 ವರ್ಷದ ಪುಟಾಣಿ ಪ್ರತಿಭಾ ಕೇಳಿದ್ದು ಐಶಾರಾಮಿ ಬದುಕನ್ನಲ್ಲ. “ಅಮ್ಮಾ ನೀನು ಕುಡಿದು ಹಣ ಖರ್ಚು ಮಾಡಿದ್ರೆ ನಮಗೆ ಊಟಕ್ಕೆ ತೊಂದರೆಯಾಗುತ್ತೆ, ಕುಡಿತ ಬಿಡು” ಅಂತ ಅಂಗಲಾಚಿದ್ದಳು. ಪಾಪ ಆ ಮಗುವಿಗೆ ಗೊತ್ತಿರಲಿಲ್ಲ, ಹೆತ್ತವಳ ದೇಹದಲ್ಲಿ ಹರಿಯುತ್ತಿರೋದು ರಕ್ತವಲ್ಲ, ಕುಡಿತದ ವಿಷ ಅಂತ. ಮಗಳ ಮಾತಿನಿಂದ ಬುದ್ಧಿ ಕಲಿಯೋದು ಬಿಟ್ಟು, ಆ ನಿರ್ಮಲಾ ಅನ್ನೋ ಹೆಣ್ಣು ಮಗಳ ಕತ್ತು ಹಿಸುಕಿ ಆಕೆಯ ಉಸಿರನ್ನೇ ನಿಲ್ಲಿಸಿಬಿಟ್ಟಳು!

ಕೊಲೆ ಮಾಡಿ ಆತ್ಮಹತ್ಯೆಯ ನಾಟಕ!
ಕೊಂದ ಮೇಲೆ ಈಕೆಗೆ ಪಶ್ಚಾತ್ತಾಪವಾಗಲಿಲ್ಲ, ಬದಲಾಗಿ ಅಪ್ಪಟ ಸಿನಿಮಾ ಸ್ಟೈಲಿನಲ್ಲಿ ಕಥೆ ಕಟ್ಟಿದಳು. “ಜ್ಯೂಸ್ ಕುಡಿಯೋಕೆ 15 ರೂಪಾಯಿ ಕೇಳಿದಳು, ಕೊಟ್ಟಿಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡಳು” ಅಂತ ಸೀರೆ ಕಟ್ಟಿ ನಾಟಕವಾಡಿದಳು. ಆದರೆ ಪೊಲೀಸರ ಹದ್ದಿನ ಕಣ್ಣಿಗೆ ಈ ಸುಳ್ಳಿನ ಕೋಟೆ ನುಚ್ಚುನೂರಾಗಿದೆ. ಈಗ ಆಕೆ ಜೈಲು ಕಂಬಿ ಎಣಿಸುತ್ತಿದ್ದಾಳೆ.
