ಮಂಗಳೂರು: ಈ ಸರ್ಕಾರಕ್ಕೆ ಯಾವುದಾದರೂ ಹೊಸ ʻಗಿಮಿಕ್’ ಮಾಡಬೇಕಂದ್ರೆ ಮೊದಲು ನೆನಪಾಗೋದೇ ನಮ್ಮ ಮಂಗಳೂರು. ಯಾವುದೇ ಹಳೆ ನಿಯಮ ಕಿತ್ತು ಹೊಸದು ಹಾಕಬೇಕಂದ್ರೆ ಮಂಗಳೂರನ್ನು ʻಪ್ರಯೋಗಶಾಲೆ’ ಮಾಡಿಕೊಳ್ಳೋದು ಇವರಿಗೆ ಹಳೆಯ ಚಟ. ಮೊದಲು ಜಿಪಿಎಸ್ ಅಂದ್ರು, ಈಗ ಈ ʻಇ-ಸ್ವತ್ತು 2.0′ ಅನ್ನೋ ಭೂತವನ್ನು ಜನರ ಹೆಗಲಿಗೆ ಏರಿಸಿದ್ದಾರೆ. ಈ ಸಾಫ್ಟ್‌ವೇರ್ ಬಂದಾಗಿನಿಂದ ಮಂಗಳೂರು ಮಹಾನಗರ ಪಾಲಿಕೆಯ ಒಳಗಡೆ ಜನರ ನೆಮ್ಮದಿ ಹರಾಜಾಗಿದೆ!

ಸಚಿವರ ಏರ್-ಕಂಡೀಷನ್ ಸುಳ್ಳು… ಜನರ ಬೆವರಿನ ಗೋಳು!
ಪಂಚಾಯತ್ ರಾಜ್ ಸಚಿವರು ಮಾತ್ರ ಬೆಂಗಳೂರಲ್ಲಿ ಕೂತು “ಸರ್ವರ್ ಉನ್ನತೀಕರಣ ಮಾಡಿದ್ದೇವೆ, ಎಲ್ಲೂ ಸಮಸ್ಯೆಯೇ ಇಲ್ಲ” ಅಂತ ಗುಂಡಾಗಿ ಸ್ಟೇಟ್‌ಮೆಂಟ್ ಕೊಡ್ತಾರೆ. ಆದರೆ ಮಂಗಳೂರಿನ ಪಾಲಿಕೆ ಕಚೇರಿಗೆ ಒಮ್ಮೆ ಬಂದು ನೋಡಿ ಸಾರ್, ಅಲ್ಲಿನ ಕಥೆಯೇ ಬೇರೆ. ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಅರ್ಜಿಗಳು ಬರೋದು ನಮ್ಮ ಮಂಗಳೂರಿಂದ. ಆದರೆ ಈ ಹೊಸ ತಂತ್ರಾಂಶವಿದೆಯಲ್ಲ, ಅದು ಅಕ್ಷರಶಃ ಪಾರ್ಶ್ವವಾಯು ಹೊಡೆದವನಂತೆ ಬಿದ್ದಿದೆ. ಅಪ್‌ಲೋಡ್ ಮಾಡೋ ಹೊತ್ತಿಗೆ ಸೈಟು ಹ್ಯಾಂಗ್ ಆಗುತ್ತೆ, ಇಲ್ಲವೇ ಇಡೀ ದಿನ ಸರ್ವರ್ ʻಬಿಜಿ’ ಅಂತ ಚಕ್ರ ತಿರುಗಿಸುತ್ತಲೇ ಇರುತ್ತೆ.

3,500 ಕೋಟಿ ಲಾಸ್… ಜನರ ಬದುಕು ಗಾಳಿ ಪಾಲು!
ಇದು ಬರೀ ಸಾಫ್ಟ್‌ವೇರ್ ದೋಷವಲ್ಲ ಸ್ವಾಮಿ, ಇದು ಅಪ್ಪಟ ಸರ್ಕಾರದ ವೈಫಲ್ಯ. ಮಂಗಳೂರಿನಲ್ಲಿ ಸೈಟು ಮಾರಿ ಮಗಳ ಮದುವೆ ಮಾಡಬೇಕಿದ್ದವರು, ಬ್ಯಾಂಕ್ ಲೋನ್ ಗೆ ಕಾಯ್ತಿರೋ ಹಿರಿಯ ನಾಗರಿಕರು ಈಗ ಹೈರಾಣಾಗಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಇಡೀ ರಾಜ್ಯಕ್ಕೆ ಸಿಗಬೇಕಿದ್ದ 3,500 ಕೋಟಿ ರೂ. ಆದಾಯ ಕೂಡ ಮಣ್ಣು ಪಾಲಾಗಿದೆ. ಸಬ್ ರಿಜಿಸ್ಟ್ರಾರ್ ಆಫೀಸುಗಳಂತೂ ಸ್ಮಶಾನ ಮೌನ ತಾಳಿವೆ. ಯಾರಾದರೂ ಒಬ್ಬರು ಪ್ರೀತಿಯಿಂದ ʻಗಿಫ್ಟ್ ಡೀಡ್’ ಕೊಡೋಕೆ ಬಂದ್ರೆ ಮಾತ್ರ ಅಲ್ಲಿನ ಸಿಬ್ಬಂದಿ ಮುಖ ನೋಡ್ತಾರೆ, ಉಳಿದಂತೆ ಮನೆ-ನಿವೇಶನ ನೋಂದಣಿ ಅನ್ನೋದು ಈಗ ಕನಸಿನ ಮಾತು!

NIC ಕೌಶಲ್ಯವೋ ಅಥವಾ ವ್ಯವಸ್ಥೆಯ ಅವಿವೇಕವೋ?
ಈ ಸಾಫ್ಟ್‌ವೇರ್ ಮಾಡಿರೋದು ನಮ್ಮ ದೇಶದ ಹೆಮ್ಮೆಯ ಎನ್‌ಐಸಿ (NIC) ಅಂತೆ. ಆದರೆ ಅದು ಹೇಗಿದೆಯೆಂದರೆ, ಅರ್ಜಿ ಹಾಕೋಕೆ ಹೋದರೆ ಅದು ಸೀದಾ ಹೋಗಿ ಕಸದ ಬುಟ್ಟಿ ಸೇರುತ್ತೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾವಿರಾರು ಅರ್ಜಿಗಳು ಧೂಳು ಹಿಡಿಯುತ್ತಿವೆ. ಜನರು ದಿನಾ ಆಫೀಸಿಗೆ ಅಲೆದು ಚಪ್ಪಲಿ ಸವೆಯುತ್ತಿದೆಯೇ ಹೊರತು ಆ ಡಿಜಿಟಲ್ ಪತ್ರ ಮಾತ್ರ ಕೈಗೆ ಸಿಗುತ್ತಿಲ್ಲ.
ಮಂಗಳೂರು ಅಂದ್ರೆ ಬುದ್ಧಿವಂತರ ಊರು ಅಂತಾರೆ. ಆದರೆ ಅಂತಹ ಊರಿನ ಜನರನ್ನೇ ಸಾಫ್ಟ್‌ವೇರ್ ಹೆಸರಲ್ಲಿ ತಿಂಗಳುಗಟ್ಟಲೆ ಕಚೇರಿ ಮೆಟ್ಟಿಲು ಹತ್ತಿಸುವ ನಿಮ್ಮ ಈ ಡಿಜಿಟಲ್ ಇಂಡಿಯಾಕ್ಕೆ ಒಂದು ದಂಡ ನಮಸ್ಕಾರ. ಸಚಿವರೇ, ಮೊದಲು ಆ ಸರ್ವರ್‌ಗೆ ಜೀವ ಕೊಡಿ, ಇಲ್ಲದಿದ್ದರೆ ಜನರ ಆಕ್ರೋಶದ ಸರ್ವರ್ ಕನೆಕ್ಟ್ ಆದ್ರೆ ನಿಮ್ಮ ಕುರ್ಚಿ ಹ್ಯಾಂಗ್ ಆಗೋದು ಗ್ಯಾರಂಟಿ!