ಮಂಗಳೂರು: ಕೊರಿಯರ್ ಮೂಲಕ ನಿಷೇಧಿತ ಎಂಡಿಎಂಎ ತರಿಸಿಕೊಂಡು ಮಾರಾಟಕ್ಕೆ ಯತ್ನಿಸಿದ್ದ ಆರೋಪಿಯನ್ನು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುಳ್ಯದ ಪೆರುವಾಹೆ ಗ್ರಾಮದ ಅಲಂತಡ್ಕ ನಿವಾಸಿ ಮುಹಮ್ಮದ್ ಅಶ್ರಫ್ ಅಲಂತಡ್ಕ(50) ಬಂಧಿತ ಆರೋಪಿ.
ಆರೋಪಿ ದೆಹಲಿಯಿಂದ ನಿಷೇದಿತ ಎಂಡಿಎಂಎನ್ನು ಕೋರಿಯರ್ ಮೂಲಕ ತರಿಸಿ ಮಂಗಳೂರಿನ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಉದ್ದೇಶ ಹೊಂದಿದ್ದ. ಇದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 1 ಲಕ್ಷ ರೂ. ಮೌಲ್ಯದ 11 ಗ್ರಾಂ ನಿಷೇದಿತ ಎಂಡಿಎಂಎ, ಮೊಬೈಲ್ 1, ಅಕ್ಟಿವಾ ಸ್ಕೂಟರ್ ಸಹಿತ ಒಟ್ಟು 1,60,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕರಾದ ರಫೀಕ್ ಕೆ.ಎಂ. ನೇತೃತ್ವ ವಹಿಸಿದ್ದರು. ಪಿಎಸ್ಐ ಸುದೀಪ್ ಎಂ.ವಿ., ಶರಣಪ್ಪ ಭಂಡಾರಿ, ಎಎಸ್ಐ ಮೋಹನ್ ಕೆ.ವಿ., ರಾಮ ಹಾಗೂ ಸಿಸಿಬಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.