
ಕಾಠ್ಮಂಡು: ಮೃತ ದೇಹವನ್ನು ಹೊತ್ತೊಯ್ಯುತ್ತಿದ್ದ ‘ಏರ್ ಡೈನಾಸ್ಟಿ’ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ (9N-AFQ) ಇಂದು(ಮಾ.18) ನೇಪಾಳದ ಕಾಠ್ಮಂಡುವಿನಿಂದ ಖೋಟಾಂಗ್ ಜಿಲ್ಲೆಯ ಬಾಲಬೇಸಿಯ ಕೃಷಿ ಭೂಮಿಯಲ್ಲಿ ಲ್ಯಾಂಡಿಂಗ್ ವೇಳೆ ಹತೋಟಿ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಅದೃಷ್ಟವಶಾತ್, ಹೆಲಿಕಾಪ್ಟರ್‌ನಲ್ಲಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಬೆಟ್ಟದ ಇಳಿಜಾರಿನಲ್ಲಿ ಇಳಿಯುವಾಗ ಹೆಲಿಕಾಪ್ಟರ್ ಉರುಳಿ ಬಿದ್ದು, ಅದರ ಹಿಂಭಾಗದ ರೆಕ್ಕೆ ಗುಡ್ಡಕ್ಕೆ ಅಪ್ಪಳಿಸಿದೆ. ಹೆಲಿಕಾಪ್ಟರ್‌ನಲ್ಲಿದ್ದ ಐವರು ಪ್ರಯಾಣಿಕರಲ್ಲಿ ಒಬ್ಬರಿಗೆ ಕಾಲಿಗೆ ಸಣ್ಣ ಗಾಯವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಕಾಠ್ಮಂಡುವಿಗೆ ಕಳುಹಿಸಲಾಗಿದೆ. ಪೈಲಟ್ ಸೇರಿದಂತೆ ಉಳಿದವರು ಸುರಕ್ಷಿತವಾಗಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಲ್ಯಾಂಡಿಂಗ್ ಸಮಯದಲ್ಲಿ ಬೀಸುತ್ತಿದ್ದ ಬಲವಾದ ಗಾಳಿ ಅಥವಾ ಹಾರುತ್ತಿದ್ದ ಧೂಳಿನಿಂದಾಗಿ ಪೈಲಟ್ ನಿಯಂತ್ರಣ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಹೆಲಿಕಾಪ್ಟರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರವು ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದೆ.