ಮತಾಂತರ ವಿರೋಧಿ ಚಿತ್ರದ ನಾಯಕಿಯೇ ಮತಾಂತರ!: ಮದುವೆಯಾಗಿ ನಿರ್ದೇಶಕನನ್ನು 10 ಕೋಟಿ ಸಾಲದ ಸುಳಿಗೆ ತಳ್ಳಿದ ಮೊನಾಲಿಸಾ

ಮುಂಬೈ: ಕುಂಭಮೇಳದ ಮೂಲಕ ರಾತ್ರೋರಾತ್ರಿ ಜಾಗತಿಕ ಮಟ್ಟದಲ್ಲಿ ವೈರಲ್ ಆಗಿದ್ದ ಸುಂದರಿ ಮೊನಾಲಿಸಾ ಅವರ ದಿಢೀರ್ ಮದುವೆ ಈಗ ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಅವರ ಬದುಕನ್ನೇ ಅಸ್ತವ್ಯಸ್ತಗೊಳಿಸಿದೆ. “ನನ್ನ 35 ವರ್ಷಗಳ ವೃತ್ತಿಜೀವನದಲ್ಲಿ ಕಂಡು ಕೇಳರಿಯದ ಸಂಕಷ್ಟಕ್ಕೆ ಸಿಲುಕಿದ್ದೇನೆ” ಎಂದು ಮಿಶ್ರಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕುಂಭಮೇಳದಲ್ಲಿ ಬಳೆ ಮತ್ತು ಹಾರ ಮಾರುತ್ತಿದ್ದ ಮೊನಾಲಿಸಾ ಸೌಂದರ್ಯಕ್ಕೆ ಮಾರುಹೋಗಿದ್ದ ಸನೋಜ್ ಮಿಶ್ರಾ, ಆಕೆಯನ್ನು ತಮ್ಮ ʻದಿ ಡೈರಿ ಆಫ್ ಮಣಿಪುರ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ದರು. ಆಕೆಗೆ ನಟನೆ ಕಲಿಸಲು ಮುಂಬೈನಿಂದ ತರಬೇತುದಾರರನ್ನು ಕರೆಸಿ, ಒಂದೂವರೆ ವರ್ಷದಲ್ಲಿ ಸುಮಾರು 42 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಅಷ್ಟೇ ಅಲ್ಲದೆ, ಆಕೆಯ ಕುಟುಂಬಕ್ಕೆ ಉಜ್ಜಯಿನಿಯಲ್ಲಿ ವಸತಿ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದರು.

ನಿರ್ದೇಶಕ ಮಿಶ್ರಾ ಅವರ ಅತೀ ದೊಡ್ಡ ಆತಂಕವೆಂದರೆ ಚಿತ್ರದ ಕಥಾವಸ್ತು. “ನನ್ನ ಚಿತ್ರದ ಕಥೆ ಧಾರ್ಮಿಕ ಮತಾಂತರದ ವಿರುದ್ಧವಾಗಿತ್ತು. ಆದರೆ ಈಗ ಚಿತ್ರದ ನಾಯಕಿಯೇ ಮತಾಂತರಗೊಂಡು ಬೇರೆ ಧರ್ಮದ ವ್ಯಕ್ತಿಯನ್ನು (ನಟ ಫರ್ಮಾನ್ ಖಾನ್) ಮದುವೆಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾನು ಸಿನಿಮಾ ಹೇಗೆ ಬಿಡುಗಡೆ ಮಾಡಲಿ? ಜನರು ಇದನ್ನು ಹೇಗೆ ಸ್ವೀಕರಿಸುತ್ತಾರೆ?” ಎಂದು ಅವರು ಪ್ರಶ್ನಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಸುಮಾರು 10 ಕೋಟಿ ರೂಪಾಯಿ ಸಾಲ ಪಡೆದಿದ್ದು, ಅದನ್ನು ತೀರಿಸಲು ಕೇವಲ ಮೂರು ತಿಂಗಳು ಮಾತ್ರ ಬಾಕಿ ಇದೆ.

ಸದ್ಯಕ್ಕೆ ನಾಯಕಿಯ ಈ ನಿರ್ಧಾರದಿಂದ ಇಡೀ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿದ್ದು, ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿರುವ ನಿರ್ದೇಶಕರು ಈಗ ದಿಕ್ಕು ತೋಚದಂತಾಗಿದ್ದಾರೆ.

error: Content is protected !!