ಟೆಹ್ರಾನ್/ಹೊಸದಿಲ್ಲಿ: ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಯುದ್ಧದಿಂದಾಗಿ ಇರಾನ್ ವಿಶ್ವದ ಅತಿ ದೊಡ್ಡ ತೈಲ ನಾಡಿ ಎನಿಸಿಕೊಂಡಿರುವ ಹಾರ್ಮುಜ್ ಜಲಸಂಧಿಯನ್ನು ಬಹುತೇಕ ಬಂದ್ ಮಾಡಿದೆ. ಆದರೆ, ಈ ಬಿಕ್ಕಟ್ಟಿನ ನಡುವೆಯೂ ಭಾರತ ಸೇರಿದಂತೆ ತನ್ನ ಸ್ನೇಹಿ ರಾಷ್ಟ್ರಗಳ ಹಡಗುಗಳಿಗೆ ಇರಾನ್ ಸುರಕ್ಷಿತ ಹಾದಿಯನ್ನು ಕಲ್ಪಿಸಿಕೊಡುತ್ತಿದೆ.

ಕಡಲ ಗುಪ್ತಚರ ಸಂಸ್ಥೆ ʻವಿಂಡ್‌ವರ್ಡ್’ ವರದಿಯ ಪ್ರಕಾರ, ಮಾರ್ಚ್ 16ರಂದು ಎಂಟು ಭಾರತೀಯ ಮೂಲದ ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಯಶಸ್ವಿಯಾಗಿ ಸಂಚರಿಸಿವೆ. ಇರಾನ್ ಪ್ರಸ್ತುತ ಶೇ. 97ರಷ್ಟು ಹಡಗುಗಳ ಸಂಚಾರಕ್ಕೆ ದಿಗ್ಬಂಧನ ಹೇರಿದ್ದರೂ, ಭಾರತ ಮತ್ತು ಚೀನಾದಂತಹ ರಾಷ್ಟ್ರಗಳೊಂದಿಗೆ ಮಾಡಿಕೊಂಡಿರುವ ವಿಶೇಷ ಒಪ್ಪಂದದ ಮೇರೆಗೆ ಆಯ್ದ ಹಡಗುಗಳಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದೆ.

ಯುದ್ಧದ ಕಾರಣದಿಂದಾಗಿ ಹಾರ್ಮುಜ್‌ನ ಮುಖ್ಯ ಜಲಮಾರ್ಗದಲ್ಲಿ ಇರಾನ್ ಮೈನ್ಸ್‌ಗಳನ್ನು (ಸಿಡಿಗುಂಡು) ಅಳವಡಿಸಿರುವ ಸಾಧ್ಯತೆ ಇರುವುದರಿಂದ, ಭಾರತೀಯ ಹಡಗುಗಳು ಇರಾನ್‌ನ ಪ್ರಾದೇಶಿಕ ಸಮುದ್ರದ (Territorial waters) ಅಂಚಿನಲ್ಲೇ ಸಂಚರಿಸುತ್ತಿವೆ. ಇರಾನ್ ಕರಾವಳಿಯನ್ನು ಅಂಟಿಕೊಂಡೇ ಸಾಗುವ ಈ ಹಡಗುಗಳು, ಜಲಸಂಧಿಯ ಪೂರ್ವ ತುದಿಯಲ್ಲಿ ಅಂತರಾಷ್ಟ್ರೀಯ ಜಲಪ್ರದೇಶವನ್ನು ಪ್ರವೇಶಿಸುತ್ತಿವೆ. ಕಳೆದ 48 ಗಂಟೆಗಳಲ್ಲಿ ಕನಿಷ್ಠ ಐದು ಬೃಹತ್ ಸರಕು ಸಾಗಣೆ ಹಡಗುಗಳು ಮತ್ತು ಎರಡು ಎಲ್‌ಪಿಜಿ (LPG) ಟ್ಯಾಂಕರ್‌ಗಳು ಈ ಮಾರ್ಗದಲ್ಲಿ ಸುರಕ್ಷಿತವಾಗಿ ಹೊರಬಂದಿವೆ.

ಫೆಬ್ರವರಿ 28ರಂದು ಯುದ್ಧ ಆರಂಭವಾದಾಗ ಪ್ರತಿ ಬ್ಯಾರೆಲ್‌ಗೆ 72.48 ಡಾಲರ್ ಇದ್ದ ಬ್ರೆಂಟ್ ಕಚ್ಚಾ ತೈಲದ ಬೆಲೆ, ಮಾರ್ಚ್ 9ರ ವೇಳೆಗೆ ದಾಖಲೆಯ 119.50 ಡಾಲರ್‌ಗೆ ಏರಿಕೆಯಾಗಿತ್ತು. ಸದ್ಯ ಇದು 103.42 ಡಾಲರ್ ಆಸುಪಾಸಿನಲ್ಲಿದೆ. ಪಶ್ಚಿಮ ರಾಷ್ಟ್ರಗಳ ಹಡಗುಗಳಿಗೆ ಕದ ಮುಚ್ಚಿರುವ ಇರಾನ್, ಭಾರತಕ್ಕೆ ಮಾತ್ರ ಹಾದಿ ಬಿಟ್ಟುಕೊಟ್ಟಿರುವುದು ಭಾರತದ ಇಂಧನ ಭದ್ರತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ.
