ಮಂಗಳೂರು: ʻವಾಯ್ಸ್ ಆಫ್ ಪಬ್ಲಿಕ್ʼ ವೆಬ್ ಮೀಡಿಯಾ ಇದರ ನೂತನ ಕಚೇರಿಯನ್ನು ಪದ್ಮಶ್ರೀ ಹರೇಕಳ ಹಾಜಬ್ಬ ಅವರು ಬುಧವಾರ ಸಂಜೆ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು. ನಗರದ ಬೆಂದೂರ್ ನಲ್ಲಿರುವ ಲೋಟಸ್ ಪ್ಯಾರಡೈಸ್ ಪ್ಲಾಜದ ಎರಡನೇ ಮಹಡಿಯಲ್ಲಿ ಸ್ಟುಡಿಯೋ ಸಹಿತ ನೂತನ ವೆಬ್ ಮೀಡಿಯಾ ಕಚೇರಿಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಬಳಿಕ ಮಾತಾಡಿದ ಅವರು, ʼವಾಯ್ಸ್ ಆಫ್ ಪಬ್ಲಿಕ್ʼ ಸುದ್ದಿ ಜಾಲತಾಣವು ಜಾತಿ, ಧರ್ಮ, ರಾಜಕೀಯ ರಹಿತವಾಗಿ ನೊಂದವರ ಶೋಷಿತರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದು ಈಗಾಗಲೇ ಜನರಿಗೆ ಹತ್ತಿರವಾಗಿದೆ. ಇಂದು ಉದ್ಘಾಟನೆಗೊಂಡ ನೂತನ ಕಚೇರಿ ಮುಖಾಂತರ ಇನ್ನಷ್ಟು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿʼ ಎಂದು ಶುಭ ಹಾರೈಸಿದರು.
ಬಳಿಕ ಮಾತಾಡಿದ ಸಿನಿಮಾ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಅವರು, ʼವಾಯ್ಸ್ ಆಫ್ ಪಬ್ಲಿಕ್ʼ ಜನರ ಧ್ವನಿಯಾಗಿ ಮೂಡಿಬರಲಿ. ಸಮಾಜದ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣುವ ಮೂಲಕ ಪತ್ರಿಕಾಧರ್ಮದ ಆಶಯದಂತೆ ಮುನ್ನಡೆಯಲಿʼ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತಾಡಿ, ʼಮಂಗಳೂರಿನಲ್ಲಿ ಸುದ್ದಿ ಮಾಧ್ಯಮಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅವುಗಳ ಜೊತೆ ಮಾನವೀಯ ಕಳಕಳಿಯುಳ್ಳ ವಾಯ್ಸ್ ಆಫ್ ಪಬ್ಲಿಕ್ ವೆಬ್ ಜಾಲತಾಣ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಇನ್ನುಮುಂದೆಯೂ ನಿರಂತರವಾಗಿ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಲಿʼ ಎಂದು ಶುಭ ಹಾರೈಸಿದರು. ಹಿರಿಯ ಜಾನಪದ ವಿಧ್ವಾಂಸ ದಯಾನಂದ ಕತ್ತಲ್ ಸಾರ್ ಮಾತಾಡಿ, ʼವಾಯ್ಸ್ ಆಫ್ ಪಬ್ಲಿಕ್ʼ ಜಾಲತಾಣ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಇಂದಿನ ಪೀಳಿಗೆಯ ಓದುಗರು ಮತ್ತು ವೀಕ್ಷಕರನ್ನು ತನ್ನತ್ತ ಸೆಳೆಯಬಲ್ಲ ತಾಕತ್ತು ಹೊಂದಿರುವ ಮಾಧ್ಯಮ ಜಿಲ್ಲೆ, ರಾಜ್ಯ ಮಾತ್ರವಲ್ಲ ಅದರಾಚೆಗೂ ಹೆಸರು ಮಾಡಲಿʼ ಎಂದರು.
ಪತ್ರಿಕಾಭವನ ಅಧ್ಯಕ್ಷ ರಾಮಕೃಷ್ಣ ಆರ್., ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಹಿರಿಯ ನ್ಯಾಯವಾದಿ ಅಬ್ದುಲ್ ರಜಾಕ್, ಉದ್ಯಮಿ ಬಾಲಕೃಷ್ಣ ಶೆಟ್ಟಿ, ಹಿರಿಯ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಆನಂದ ಶೆಟ್ಟಿ, ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಜಯಕಿರಣ ಸಂಪಾದಕ ದಿತೇಶ್, ವಾಯ್ಸ್ ಆಫ್ ಪಬ್ಲಿಕ್ ವೆಬ್ ಮೀಡಿಯಾದ ಆಡಳಿತ ನಿರ್ದೇಶಕಿ ಅಡ್ವೊಕೇಟ್ ಕರೀಷ್ಮ ಶೇಖ್, ಪ್ರಧಾನ ಸಂಪಾದಕ ಶಶಿ ಬೆಳ್ಳಾಯರು, ಉಪ ಸಂಪಾದಕ ಗಿರೀಶ್ ಮಳಲಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.