ಮಂಗಳೂರು: ಪವಿತ್ರ ರಂಝಾನ್ ಉಪವಾಸ ವ್ರತ ಮುಕ್ತಾಯಗೊಂಡು, ಸಂಭ್ರಮದ ಈದ್-ಉಲ್-ಫಿತರ್ ಆಚರಣೆಗೆ ನಾಂದಿ ಹಾಡುವ ಶವ್ವಾಲ್ ತಿಂಗಳ ಪ್ರಥಮ ಚಂದ್ರ ದರ್ಶನಕ್ಕೆ ಕರಾವಳಿ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಬಂದರ್‌ನ ಪ್ರಸಿದ್ಧ ಮಸ್ಜಿದ್ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ವತಿಯಿಂದ ಸಾರ್ವಜನಿಕರಿಗೆ ಪ್ರಮುಖ ಸೂಚನೆಯನ್ನು ನೀಡಲಾಗಿದೆ.

ಬರುವ ಮಾರ್ಚ್ 19, 2026ರ ಗುರುವಾರ ರಾತ್ರಿ (ಬುಧವಾರ ಸೂರ್ಯಾಸ್ತದ ನಂತರ) ಶವ್ವಾಲ್ ಚಂದ್ರ ದರ್ಶನವಾಗುವ ಸಾಧ್ಯತೆ ದಟ್ಟವಾಗಿದೆ. ಕರಾವಳಿಯ ಯಾವುದೇ ಭಾಗದಲ್ಲಿ ಚಂದ್ರ ದರ್ಶನವಾದಲ್ಲಿ, ಮುಸ್ಲಿಂ ಬಾಂಧವರು ತಕ್ಷಣವೇ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹರಿ ಅವರ ಗಮನಕ್ಕೆ ತರಬೇಕೆಂದು ಮಸೀದಿಯ ಕೋಶಾಧಿಕಾರಿ ಹಾಜಿ ಎಸ್.ಎಂ. ರಶೀದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಚಂದ್ರ ದರ್ಶನದ ದೃಢೀಕರಣದ ಆಧಾರದ ಮೇಲೆ ಜಿಲ್ಲಾ ಖಾಝಿಗಳು ಅಧಿಕೃತವಾಗಿ ಹಬ್ಬದ ಘೋಷಣೆಯನ್ನು ಮಾಡಲಿದ್ದಾರೆ. ಸಾರ್ವಜನಿಕರು ಮಾಹಿತಿ ನೀಡಲು ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ:
ಮೊಬೈಲ್: 97407 99555 / 77607 27162
ದೂರವಾಣಿ: 0824 – 2428989(ಬಂದರ್ ಮಸೀದಿ ಕಚೇರಿ)
ಕರಾವಳಿಯಾದ್ಯಂತ ಹಬ್ಬದ ಸಡಗರ ಮನೆಮಾಡಿದ್ದು, ಚಂದ್ರ ದರ್ಶನದ ಕ್ಷಣಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.