ಉಡುಪಿ: ಮಲ್ಪೆ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮಗುವಿನ ತಾಯಿಯನ್ನು ಪತ್ತೆ ಹಚ್ಚಲಾಗಿದ್ದು, ಆಕೆಯ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ. ಮಲ್ಪೆ ಜಂಕ್ಷನ್‌ನಲ್ಲಿರುವ ಜಾಮೀಯ ಮಸೀದಿಯ ಬಳಿಯ ಮಸೀದಿಗೆ ಸಂಬಂಧಿಸಿದ ಕಟ್ಟಡದಲ್ಲಿರುವ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಶೌಚಾಲಯದ ಒಳಗಿನ ಗೋಡೆಯ ಮೇಲೆ ರಕ್ತದ ಕಲೆಗಳು ಇರುವುದು ಕಂಡು ಬಂದಿತ್ತು.
ನವಜಾತ ಶಿಶು ಸ್ಥಳೀಯ ಆಫ್ರಿನಾ ಎಂಬವರದ್ದು ಎಂಬುದು ತಿಳಿದುಬಂದಿದೆ. ಈಗಾಗಲೇ ಅವರಿಗೆ ಒಂದು ಮಗು ಇದ್ದು, ಇನ್ನೊಂದು 7-8 ತಿಂಗಳ ಗರ್ಭವನ್ನು, ಗರ್ಭಪಾತ ಮಾಡಿಸಿಕೊಳ್ಳಲು ಯಾವುದೇ ವೈದ್ಯಕೀಯ ನೆರವನ್ನು ಪಡೆದು ಕೊಳ್ಳದೆ, ಇವರೇ ಸ್ವತಹ ಪ್ರಯತ್ನಿಸಿದ್ದರು. ಮಲ್ಪೆ ಮಸೀದಿ ಕಟ್ಟಡದಲ್ಲಿರುವ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದರು ಎಂದು ಎಸ್ಪಿ ಡಾ.ಅರುಣ್ ತಿಳಿಸಿದ್ದಾರೆ. ಬಳಿಕ ಆಕೆ ಮಗುವನ್ನು ಅಲ್ಲಿಯೇ ಬಿಟ್ಟು ತೆರಳಿರುವುದಾಗಿ ಅವರ ಸ್ವಇಚ್ಛಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.