ಮೈಸೂರು: ರಾಜ್ಯ ರಾಜಕಾರಣದ ಅನುಭವಿ ನಾಯಕ ಮತ್ತು ಸಾಹಿತಿ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಚುನಾವಣಾ ರಾಜಕೀಯಕ್ಕೆ ಅಚ್ಚರಿಯ ವಿದಾಯ ಘೋಷಿಸಿದ್ದಾರೆ. ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದಲಾದ ರಾಜಕೀಯ ವ್ಯವಸ್ಥೆ ಮತ್ತು ಹಣದ ಪ್ರಭಾವದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.

ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಲು ವಿಶ್ವನಾಥ್ ಅವರು ನೀಡಿದ ಕಾರಣ ಇಂದಿನ ಪ್ರಜಾಪ್ರಭುತ್ವದ ಸ್ಥಿತಿಗೆ ಕೈಗನ್ನಡಿ ಹಿಡಿದಂತಿದೆ. “ಇವತ್ತು ಚುನಾವಣೆ ಎದುರಿಸಬೇಕೆಂದರೆ ಕೋಟಿ ಕೋಟಿ ಹಣ ಬೇಕು. ರಿಯಲ್ ಎಸ್ಟೇಟ್ ಮಾಡುವವರು ನಿವೇಶನ ಮಾರಿ 50 ಕೋಟಿ ಖರ್ಚು ಮಾಡಬಲ್ಲರು. ಆದರೆ ನನ್ನ ಬಳಿ ಇರುವುದು ಕೇವಲ ಒಂದು ಮನೆ ಮತ್ತು ಒಂದು ನಿವೇಶನ ಮಾತ್ರ. ಅಷ್ಟು ಹಣ ಖರ್ಚು ಮಾಡುವ ಶಕ್ತಿ ನನಗಿಲ್ಲ” ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು. ರಾಜಕೀಯದಲ್ಲಿ ಮುಂದುವರಿಯುವುದಾಗಿ ಹೇಳಿದ ಅವರು, ಇನ್ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಿವೃತ್ತಿ ಘೋಷಣೆಯ ಬೆನ್ನಲ್ಲೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದರು. “ಪೋಕ್ಸೋ ಪ್ರಕರಣದಂತಹ ಗಂಭೀರ ಆರೋಪ ಎದುರಿಸುತ್ತಿರುವ ನಾಯಕರಿಗೆ ಅಭಿಮಾನೋತ್ಸವ ಮತ್ತು ಸನ್ಮಾನಗಳನ್ನು ಮಾಡುತ್ತಿರುವುದು ರಾಜ್ಯದ ಘನತೆಗೆ ಕಪ್ಪುಚುಕ್ಕೆಯಾಗಿದೆ. ಸ್ವತಃ ವಕೀಲರಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಇದೆಲ್ಲಾ ತಿಳಿಯುತ್ತಿಲ್ಲವೇ?” ಎಂದು ಪ್ರಶ್ನಿಸಿದರು.

ಡಿಜಿಪಿ ರಾಮಚಂದ್ರ ರಾವ್ ಮರುನೇಮಕಕ್ಕೆ ಆಕ್ರೋಶ:
ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮೇಲಿನ ಅಮಾನತು ಆದೇಶ ರದ್ದುಗೊಳಿಸಿ, ಮತ್ತೆ ಹುದ್ದೆ ನೀಡಿದ ಸರ್ಕಾರದ ಕ್ರಮವನ್ನು ಅವರು ಕಟುವಾಗಿ ಟೀಕಿಸಿದರು. “ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲೇ ವಿಡಿಯೋ ಸಾಬೀತಾದ ಮೇಲೆಯೂ ಅವರನ್ನು ಮರುನೇಮಕ ಮಾಡಿರುವುದು ಸರಿಯಲ್ಲ. ಈ ಸರ್ಕಾರದಲ್ಲಿ ನ್ಯಾಯಕ್ಕೆ ಬೆಲೆ ಇಲ್ಲದಂತಾಗಿದೆ” ಎಂದು ಕಿಡಿ ಕಾರಿದರು.
