ಮೆದಿನಿಪುರ: ಬಿಜೆಪಿ ನಾಯಕ ಸುವೇಂದು ಅಧಿಕಾರಿಯವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ಭೀಕರ ಹತ್ಯೆ ಪಶ್ಚಿಮ ಬಂಗಾಳದಲ್ಲಿ ಜ್ವಾಲಾಮುಖಿಯಂತೆ ಸ್ಫೋಟಿಸಿದೆ. ಹತ್ಯೆಯನ್ನು ಖಂಡಿಸಿ ಸಾವಿರಾರು ಬಿಜೆಪಿ ಕಾರ್ಯಕರ್ತರು ರಸ್ತೆಗಿಳಿದಿದ್ದು, ಪಶ್ಚಿಮ ಮೆದಿನಿಪುರದ ಭಾದುತಲಾ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣವಾಗಿ ತಡೆದಿದ್ದಾರೆ. ಇದರಿಂದಾಗಿ ಕಿಲೋಮೀಟರ್‌ಗಟ್ಟಲೆ ವಾಹನ ಸವಾರರು ಪರದಾಡುವಂತಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಘಟನೆ ನಡೆದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಪಶ್ಚಿಮ ಮೆದಿನಿಪುರದ ಪ್ರಮುಖ ರಸ್ತೆಗಳಿಗೆ ಧಾವಿಸಿ ಟಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಟಿಎಂಸಿ ಸರ್ಕಾರದಲ್ಲಿ ಪ್ರಾಣಕ್ಕೆ ರಕ್ಷಣೆ ಇಲ್ಲ” ಎಂದು ಘೋಷಣೆ ಕೂಗುತ್ತಿರುವ ಪ್ರತಿಭಟನಾಕಾರರು, ಹಂತಕರನ್ನು ತಕ್ಷಣವೇ ಬಂಧಿಸುವಂತೆ ಪಟ್ಟು ಹಿಡಿದಿದ್ದಾರೆ. ಭಾದುತಲಾ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಅಡ್ಡಗಟ್ಟಲಾಗಿದ್ದು, ನೂರಾರು ಸರಕು ಲಾರಿಗಳು ಸಾಲುಗಟ್ಟಿ ನಿಂತಿವೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಮುಂದಾದಾಗ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.

ಪ್ರತಿಭಟನಾ ನಿರತ ಬಿಜೆಪಿ ಮುಖಂಡರು ಇದು ಆಡಳಿತಾರೂಢ ಟಿಎಂಸಿ ಪ್ರಾಯೋಜಿತ “ರಾಜಕೀಯ ಕಗ್ಗೊಲೆ” ಎಂದು ನೇರವಾಗಿ ಆರೋಪಿಸಿದ್ದಾರೆ. “ಸುವೇಂದು ಅಧಿಕಾರಿಯವರನ್ನು ದುರ್ಬಲಗೊಳಿಸಲು ಅವರ ಆಪ್ತರನ್ನು ಗುರಿಯಾಗಿಸಲಾಗುತ್ತಿದೆ. ಗ್ಲಾಕ್ ಪಿಸ್ತೂಲ್ ಬಳಸಿ ನಡುರಸ್ತೆಯಲ್ಲಿ ಹತ್ಯೆ ಮಾಡಲಾಗಿದೆ ಎಂದರೆ ಹಂತಕರಿಗೆ ಸರ್ಕಾರದ ಬೆಂಬಲವಿಲ್ಲದೆ ಇರಲು ಸಾಧ್ಯವೇ?” ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ. ಪಶ್ಚಿಮ ಬಂಗಾಳದಾದ್ಯಂತ ಕರಾಳ ದಿನ ಆಚರಿಸಲು ಬಿಜೆಪಿ ಕರೆ ನೀಡಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿದೆ.

ಪೊಲೀಸರ ಬಿಗಿ ಭದ್ರತೆ – ಹೈ ಅಲರ್ಟ್:
ಪ್ರತಿಭಟನೆ ಹತೋಟಿ ಮೀರುತ್ತಿದ್ದಂತೆ ಮೆದಿನಿಪುರದಾದ್ಯಂತ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಹೆದ್ದಾರಿ ಸಂಚಾರವನ್ನು ಸುಗಮಗೊಳಿಸಲು ಪೊಲೀಸರು ಸೌಮ್ಯ ಲಾಠಿ ಪ್ರಹಾರ ನಡೆಸಿದ ವರದಿಯಾಗಿದೆ. ಈ ನಡುವೆ ರಾಜ್ಯ ಡಿಜಿಪಿ ಸಿದ್ಧಿನಾಥ್ ಗುಪ್ತ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, “ನಾಲ್ಕು ಬೈಕ್‌ಗಳಲ್ಲಿ ಬಂದ ಹಂತಕರಿಗಾಗಿ ಜಾಲ ಬೀಸಲಾಗುತ್ತಿದೆ, ಶೀಘ್ರವೇ ಬಂಧಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ. ಆದರೆ, ಹಂತಕರ ಬಂಧನವಾಗುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಬಿಜೆಪಿ ಪಟ್ಟು ಹಿಡಿದಿದೆ.

ಒಂದೆಡೆ ಹೆದ್ದಾರಿ ಬಂದ್ ಆಗಿದ್ದರೆ, ಮತ್ತೊಂದೆಡೆ ಸುವೇಂದು ಅಧಿಕಾರಿಯವರ ನಿವಾಸದ ಸುತ್ತಲೂ ಸಿಆರ್‌ಪಿಎಫ್ ಪಡೆಗಳು ಸರ್ಪಗಾವಲು ಹಾಕಿವೆ. ಹತ್ಯೆಯಾದ ಚಂದ್ರನಾಥ್ ರಥ್ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮೆದಿನಿಪುರ ಭಾಗದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಲ್ಪಟ್ಟಿದ್ದು, ಇಡೀ ಜಿಲ್ಲೆಯಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.