ಮೇ 28: ಅಮ್ಮ ಮಂಗಳೂರಿಗೆ; ಇಂದು ಚಪ್ಪರ ಮುಹೂರ್ತ

ಮಂಗಳೂರು: ನಗರದ ಮಾತಾ ಅಮೃತಾನಂದಮಯಿ ಮಠಕ್ಕೆ ಮೇ 28 ರಂದು ಆಗಮಿಸುವ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಕಾರ್ಯಕ್ರಮ ಬ್ರಹ್ಮಸ್ಥಾನಂ ಮಹೋತ್ಸವ ಮತ್ತು ಅಮೃತಸಂಗಮ 2026″ದ ಪ್ರಯುಕ್ತ ಚಪ್ಪರ ಮುಹೂರ್ತ ಜರುಗಿತು.

ಸ್ವಾಮಿನಿ ಮಂಗಳಾಮೃತ ಪ್ರಾಣರವರ ಉಪಸ್ಥಿತಿಯಲ್ಲಿ ನಡೆದ ಈ‌ ಕಾರ್ಯಕ್ರಮದಲ್ಲಿ ನಿಕಟಪೂರ್ವ ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಾನವ ಮಹಾದೇವತ್ವಕ್ಕೆ ಏರುವ ಪುಣ್ಯಭೂಮಿ ಭಾರತ. ನಡೆದಾಡುವ, ಮಾತನಾಡುವ ದೇವರಾದ ಮಾತಾ ಅಮೃತಾನಂದಮಯಿ ದೇವಿಯವರು ಜಗತ್ತಿಗೆ ಪ್ರೇಮದ ಸಂದೇಶಗಳನ್ನು ಸಾರುತ್ತಿದ್ದಾರೆ. ಪ್ರೀತಿ ಮತ್ತು ವಾತ್ಸಲ್ಯ ತಾಯಿಯ ಸಹಜ ಗುಣ. ಅಮ್ಮನವರು ಶ್ರೇಷ್ಠವಾದ ಶಿಕ್ಷಣ ಯಜ್ಞ , ಆರೋಗ್ಯ ಯಜ್ಞ ಮೊದಲಾದ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.ಇಲ್ಲಿನ ಸೇವಾ ಸಮಿತಿಯು ಅತ್ಯುತ್ತಮ ಕಾರ್ಯಕ್ರಮಗಳನ್ನು ಕಳೆದ ಹಲವು ವರ್ಷಗಳಿಂದ ಮಾಡುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಗೌರವಾಧ್ಯಕ್ಷ ಡಾ.ಜೀವರಾಜ್ ಸೊರಕೆ ಮಾತನಾಡಿ, ಅಮ್ಮನವರು ಈ ಬಾರಿ ರಾಜ್ಯದಲ್ಲಿ ಏಕೈಕ ಸ್ಥಳಕ್ಕೆ ಭೇಟಿ ನೀಡುತ್ತಿರುವುದು ಅದರಲ್ಲಿ ಮಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಸುವ ಸೌಭಾಗ್ಯ ಇಲ್ಲಿನ ಭಕ್ತರ ಪಾಲಿಗೆ ಲಭಿಸಿದೆ. ಮಂಗಳೂರಿನ ಕಾರ್ಯಕ್ರಮ ಎಂದರೆ ಅದು ಶ್ರೇಷ್ಠ ಮಟ್ಟದ ಕಾರ್ಯಕ್ರಮವಾಗಿರುತ್ತದೆ ಎಂಬ ಅನುಭವ ಅಸಂಖ್ಯಾತ ಭಕ್ತರದ್ದಾಗಿದೆ. ಅವರೆಲ್ಲರೂ ಅಮ್ಮನವರ ದರ್ಶನಕ್ಕೆ ಮಂಗಳೂರನ್ನು ಆಯ್ಕೆ ಮಾಡುತ್ತಿರುವ ಕಾರಣ ನಮ್ಮ ಜವಾಬ್ದಾರಿ ಬಹಳ ಮಹತ್ವದ್ದಾಗಿದೆ. ಆದಷ್ಟು ಹೆಚ್ಚಿನ ಭಕ್ತರು ಪೂಜೆ ಸಲ್ಲಿಸುವ ಮೂಲಕ ಅಮ್ಮನ ಕಾರ್ಯಕ್ರಮದ ಯಶಸ್ವಿಯಾಗಿ ನೆರವೇರಲು ಸರ್ವರ ಸಹಕಾರ ಕೋರಿದರು.

ಸ್ವಾಮಿನಿ ಮಂಗಳಾಮೃತ ಪ್ರಾಣರವರು ಆಶೀರ್ವಚನವಿತ್ತು “ಅಮ್ಮನವರ ಭೇಟಿಯ ಬಗ್ಗೆ ಕಳೆದ ಏಳು ವರ್ಷಗಳಿಂದ ಕಾತರದಿಂದ ಕಾದು ಕುಳಿತ ಭಕ್ತರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು ಹೆಚ್ಚಿನ ಜನರು ಇದರ ಪ್ರಯೋಜನ ಪಡೆಯುವಂತೆ ಕರೆಯಿತ್ತರು.

ಗೌರವಾಧ್ಯಕ್ಷರಾದ ಡಾ. ವಸಂತ ಕುಮಾರ್ ಪೆರ್ಲ ಕಾರ್ಯಕ್ರಮ ನಿರೂಪಣೆ ಮಾಡಿ ಅಮ್ಮನ ಕಾರ್ಯಕ್ರಮದ ಸ್ವರೂಪವನ್ನು ತಿಳಿಸಿದರು. ಗುತ್ತಿಗೆದಾರ ಶ್ರೀ ಭಾಸ್ಕರ್ ಭಟ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ‌ಮೇಯರ್ ಗಣೇಶ್ ಹೊಸಬೆಟ್ಟು, ಗೌರವ ಅಧ್ಯಕ್ಷ ಸಿ ಎ. ವಾಮನ್ ಕಾಮತ್, ಮುರಳೀಧರ್ ಶೆಟ್ಟಿ, ವಾಮನ್ ಮೈಂದನ್,ಚಂದ್ರಹಾಸ್ ಸುವರ್ಣ,ಗಣೇಶ್ ಕೆ,ಕೃಷ್ಣಶೆಟ್ಟಿ,ಅಡ್ವೊಕೇಟ್ ಪುಷ್ಪಲತಾ, ಅಮೃತ ವಿದ್ಯಾಲಯಂ ಪ್ರಾಂಶುಪಾಲೆ ಮಧುಲಿಖಾ ರಾವ್ ಸೇವಾ ಸಮಿತಿಯ ಪದಾಧಿಕಾರಿಗಳು, ಅಯುಧ್ ಮಂಗಳೂರು ಮತ್ತು ಅಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

error: Content is protected !!