
ಮಂಗಳೂರಲ್ಲಿ ಕಾಂಗ್ರೆಸ್ ನಿಂದ ಬೃಹತ್ ಎಸ್ ಐ ಆರ್ ಜಾಗೃತಿ ಸಮಾವೇಶ
ಮಂಗಳೂರು: “ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೇಳಿದಂತೆ ಜೀವನ ಮಾಡಲಿಕ್ಕೋಸ್ಕರ ರಾಜಕಾರಣ ಮಾಡ್ಬೇಡಿ, ಜನರಿಗೆ ಜೀವನ ಕಲ್ಪಿಸಲು ರಾಜಕಾರಣ ಮಾಡಿ. ದೇಶದಲ್ಲಿ ಜನಸಾಮಾನ್ಯರಿಗೆ ಕಾಂಗ್ರೆಸ್ ಕೊಟ್ಟಿರುವ ಕೊಡುಗೆಯನ್ನು ಯಾರೂ ಕೊಡಲು ಸಾಧ್ಯವಿಲ್ಲ. ದೇಶ ಕಟ್ಟಿದವರು ಕಾಂಗ್ರೆಸ್ಸಿನವರು. ಹೀಗಾಗಿ ಯಾರಾದರೂ ನಾವು ಈ ದೇಶದವರು ಅಲ್ಲ ಅಂತಂದ್ರೆ ಒಪ್ಪಿಕೊಳ್ಳಲು ಹೋಗಬೇಡಿ. ಬಿಜೆಪಿ ಷಡ್ಯಂತ್ರವನ್ನು ಮಾಡಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುತ್ತಿದೆ. ನಾವೇನಾದರೂ ಎಚ್ಚರ ತಪ್ಪಿದಲ್ಲಿ ಅವರು ಸಂವಿಧಾನವನ್ನೇ ಬುಡಮೇಲು ಮಾಡುತ್ತಾರೆ. ಪಶ್ಚಿಮ ಬಂಗಾಲದಲ್ಲೂ ಇದೇ ರೀತಿ ಷಡ್ಯಂತ್ರ ನಡೆಸಿ ಅಧಿಕಾರ ಹಿಡಿದಿದ್ದಾರೆ. ಸಂವಿಧಾನ, ತ್ರಿವರ್ಣ ಧ್ವಜದ ಮೇಲೆ ನಂಬಿಕೆ ಇಲ್ಲದವರು ನಮ್ಮನ್ನು ಆಳ್ವಿಕೆ ಮಾಡಲು ಮುಂದಾಗಿದ್ದಾರೆ. ಇದನ್ನು ನಾವೆಲ್ಲರೂ ಒಗ್ಗಟ್ಟಾಗಿ ಎದುರಿಸಬೇಕು“ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಅವರು ನಗರದ ಟೌನ್ ಹಾಲ್ ನಲ್ಲಿ ಜರುಗಿದ ಎಸ್ ಐ ಆರ್ ಜಾಗೃತಿ ಸಮಾವೇಶದಲ್ಲಿ ಮಾತಾಡಿದರು.

ಬಳಿಕ ಮಾತಾಡಿದ ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರು, ನೂತನ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಮಾತನಾಡಿ, “ಪ್ರಜಾಪ್ರಭುತ್ವದ ಬುನಾದಿ ಎಂದು ಕರೆಯಲ್ಪಡುವ ಪಂಚಾಯತ್ ಚುನಾವಣೆಗಳು ಕಳೆದೊಂದು ವರ್ಷಗಳಿಂದ ನಡೆಯದೆ ಬಾಕಿ ಉಳಿದಿವೆ. ನೂತನ ಅಧ್ಯಕ್ಷರ ಅವಧಿಯಲ್ಲಿ ಈ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಮರುಚಾಲನೆ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳು ನಡೆಯಬೇಕು,” ಎಂದು ಆಶಿಸಿದರು.

“ಬಿ.ಕೆ. ಹರಿಪ್ರಸಾದ್ ಅವರ ಸುದೀರ್ಘ ಸಾಂಸ್ಥಿಕ ಅನುಭವದ ಮೂಲಕ ಪಕ್ಷವು ತಳಮಟ್ಟದಿಂದ ಮತ್ತಷ್ಟು ಬಲಗೊಳ್ಳಲಿದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಮಗದೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಲಿ. ಹರಿಪ್ರಸಾದ್ ಅವರ ನಾಯಕತ್ವದಲ್ಲಿ ಪಕ್ಷದ ಸಂಘಟನೆ ಚುರುಕುಗೊಳ್ಳಲಿದ್ದು, ಸ್ಥಳೀಯ ಮಟ್ಟದ ನಾಯಕತ್ವಕ್ಕೆ ಹೆಚ್ಚಿನ ಶಕ್ತಿ ಸಿಗಲಿದೆ ಎಂದರು.
ಸಚಿವ ಯು.ಟಿ.ಖಾದರ್, ಉತ್ತರ ಕನ್ನಡ ಉಸ್ತುವಾರಿ ಸಚಿವ ಮಾಂಕಾಳ ವೈದ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪದ್ಮರಾಜ್ ಆರ್. ಮತ್ತಿತರರು ಉಪಸ್ಥಿತರಿದ್ದರು.
