
ಮಂಗಳೂರು: ಇತ್ತೀಚೆಗೆ ತೊಕ್ಕೊಟ್ಟಿನಲ್ಲಿ ನಡೆದ ರೌಡಿ ಶೀಟರ್ ಆರಿಫ್ (46) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು, ಮತ್ತೆ ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅರ್ಷದ್, ಪುಚ್ಚೆ ನಿಸಾಕ್, ಜುನೈದ್ ಬಂಧಿತ ಆರೋಪಿಗಳು.

ಅರ್ಷದ್ ಹತ್ಯೆಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾಗಿದ್ದು, ಹಂತಕರಿಗೆ ಅಗತ್ಯವಿದ್ದ ಮಾರಕಾಸ್ತ್ರಗಳನ್ನು ಒದಗಿಸಿದ್ದಲ್ಲದೆ, ಪೊಲೀಸರ ಚಲನವಲನದ ಬಗ್ಗೆ ನಿರಂತರ ಮಾಹಿತಿ ನೀಡುತ್ತಿದ್ದ. ಅಲ್ಲದೆ, ಕೃತ್ಯ ಎಸಗಲು ವಾಹನ ಮತ್ತು ಹಣದ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದ. ಪುಚ್ಚೆ ನಿಸಾಕ್ ಎಂಬಾತ ಆರಿಫ್ ಮೇಲೆ 2022ರಲ್ಲಿ ನಡೆದ ದಾಳಿಯಲ್ಲಿಯೂ ಭಾಗಿಯಾಗಿದ್ದ, ಹಾಗೆಯೇ ಫೆಬ್ರವರಿಯಲ್ಲಿ ನಡೆದ ಹತ್ಯೆಯ ವಿಫಲ ಯತ್ನದಲ್ಲೂ ಸಕ್ರಿಯನಾಗಿದ್ದ. ಜುನೈದ್ ಹಂತಕರಿಗೆ ವಾಹನದ ಸೌಲಭ್ಯ ಕಲ್ಪಿಸಿದ್ದ, ಹಾಗೆಯೇ ಫೆಬ್ರವರಿಯಲ್ಲಿ ನಡೆದ ದಾಳಿ ಯತ್ನದ ತಂಡದ ಸದಸ್ಯನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯ ಸಂಚು ರೂಪಿಸುವಲ್ಲಿ ಮತ್ತು ದಾಳಿಗೆ ಸಹಕರಿಸಿದ ಆರೋಪದ ಮೇಲೆ ಈ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆಯ ವೇಳೆ ಹಂತ ಹಂತವಾಗಿ ಸಿದ್ಧಪಡಿಸಲಾಗಿದ್ದ ಮಾರಕ ಸ್ಕೆಚ್‌ಗಳು ಬಯಲಿಗೆ ಬಂದಿವೆ.