
ಮಂಗಳೂರು: ನಗರದ ಮಂಗಳೂರು ತಾಲೂಕು ಕಚೇರಿಯಲ್ಲಿ ವಂಶವೃಕ್ಷ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ವಾಸ್ತವ್ಯ ಪ್ರಮಾಣ ಪತ್ರ ಸೇರಿದಂತೆ ವಿವಿಧ ದಾಖಲೆಗಳಿಗೆ ಅರ್ಜಿ ಸಲ್ಲಿಸಲು ಜಾರಿಗೆ ತಂದಿರುವ ಟೋಕನ್ ವ್ಯವಸ್ಥೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಎರಡು ತಿಂಗಳ ಹಿಂದೆ ಆರಂಭಗೊಂಡಿರುವ ಈ ವ್ಯವಸ್ಥೆಯಿಂದ ಸರಳವಾಗಿ ಮುಗಿಯುತ್ತಿದ್ದ ಕೆಲಸಗಳು ಈಗ ವಾರಗಳ ಕಾಲ ವಿಳಂಬವಾಗುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ತಾಲೂಕು ಕಚೇರಿಗೆ ಮತ್ತೆ ಮತ್ತೆ ಅಲೆಯುವಂತಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಹಿಂದೆ ಗ್ರಾಮ ಆಡಳಿತಾಧಿಕಾರಿ (ವಿಎಒ) ಅರ್ಜಿಗಳನ್ನು ಪರಿಶೀಲಿಸಿದ ತಕ್ಷಣವೇ ಕಚೇರಿಯ ಹೊರಗಿನ ಕೌಂಟರ್‌ನಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿತ್ತು. ಬಳಿಕ ಏಳು-ಎಂಟು ದಿನಗಳೊಳಗೆ ಅಗತ್ಯ ದಾಖಲೆಗಳು ಅರ್ಜಿದಾರರ ಕೈ ಸೇರಿಸುತ್ತಿದ್ದವು. ಆದರೆ ಈಗ ವಿಎಒ ಪರಿಶೀಲನೆ ಬಳಿಕವೂ ಅರ್ಜಿ ಸಲ್ಲಿಸಲು ಪ್ರತ್ಯೇಕ ಟೋಕನ್ ಕಡ್ಡಾಯಗೊಳಿಸಲಾಗಿದೆ.
ಟೋಕನ್ ಪಡೆಯಲು ಹೋದರೆ ಒಂದು ಅಥವಾ ಎರಡು ವಾರಗಳ ನಂತರದ ದಿನಾಂಕ ನೀಡಲಾಗುತ್ತಿದ್ದು, ಆ ದಿನವೇ ಮತ್ತೆ ತಾಲೂಕು ಕಚೇರಿಗೆ ಬಂದು ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸಿದ ಬಳಿಕ ದಾಖಲೆ ಪಡೆಯಲು ಮತ್ತೆ 10ರಿಂದ 15 ದಿನಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಒಂದು ಪ್ರಮಾಣ ಪತ್ರಕ್ಕಾಗಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಹಲವು ಬಾರಿ ತಾಲೂಕು ಕಚೇರಿಗೆ ಅಲೆದಾಡಬೇಕಾಗಿದ್ದು, ಸಮಯ ಹಾಗೂ ಹಣ ಎರಡೂ ವ್ಯರ್ಥವಾಗುತ್ತಿದೆ ಎಂದು ದೂರಲಾಗಿದೆ.
ತಾಲೂಕಿನ ದೂರದ ಗ್ರಾಮಗಳಿಂದ ಬರುವ ಸಾರ್ವಜನಿಕರು, ವಯೋವೃದ್ಧರು, ವಿಕಲಚೇತನರು ಹಾಗೂ ದಿನಗೂಲಿ ಕಾರ್ಮಿಕರು ಈ ವ್ಯವಸ್ಥೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಿಬ್ಬಂದಿಗೆ ಸಮಸ್ಯೆ ವಿವರಿಸಿದರೂ, “ಟೋಕನ್ ಇದ್ದರೆ ಮಾತ್ರ ಅರ್ಜಿ ಸ್ವೀಕರಿಸುತ್ತೇವೆ” ಎಂಬ ಉಡಾಫೆಯ ಉತ್ತರ ಸಿಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅರ್ಜಿ ಸಲ್ಲಿಸುವುದಕ್ಕೂ ಟೋಕನ್ ಕಡ್ಡಾಯಗೊಳಿಸಿರುವುದು ಸರ್ಕಾರದ ಅಥವಾ ಹಿರಿಯ ಅಧಿಕಾರಿಗಳ ಆದೇಶವೇ, ಅಥವಾ ಕೆಲ ಸಿಬ್ಬಂದಿಯ ಏಕಪಕ್ಷೀಯ ನಿರ್ಧಾರವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಜನಸ್ನೇಹಿಯಾಗಿರಬೇಕಾದ ತಾಲೂಕು ಕಚೇರಿಯ ಆಡಳಿತವೇ ಜನರನ್ನು ಅಲೆದಾಡಿಸುತ್ತಿರುವುದು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದ್ದು, ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಈ ಅವೈಜ್ಞಾನಿಕ ಟೋಕನ್ ವ್ಯವಸ್ಥೆಯನ್ನು ರದ್ದುಪಡಿಸಿ ಹಿಂದಿನಂತೆ ಅರ್ಜಿಗಳನ್ನು ನೇರವಾಗಿ ಸ್ವೀಕರಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
