
ಮಂಗಳೂರು: ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ಮಂಗಳೂರು ಕುಳಾಯಿ ವತಿಯಿಂದ ನಾಳೆ ಗುರುವಾರ ವಾರ್ಷಿಕ ಶ್ರೀ ಜಗನ್ನಾಥ ರಥಯಾತ್ರೆಯನ್ನು ಅತ್ಯಂತ ವೈಭವದಿಂದ ಆಯೋಜಿಸಲಾಗಿದೆ ಎಂದು ಪೂಜ್ಯ ನಾಮ ನಿಷ್ಠ ದಾಸ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಕಳೆದ ವರ್ಷ ಆಯೋಜಿಸಲಾದ ರಥಯಾತ್ರೆಗೆ ಭಕ್ತರು ಹಾಗೂ ಸಾರ್ವಜನಿಕರಿಂದ ದೊರೆತ ಅದ್ಭುತ ಸ್ಪಂದನೆಯ ಹಿನ್ನೆಲೆಯಲ್ಲಿ, ಈ ವರ್ಷದ ರಥಯಾತ್ರೆಯನ್ನು ಇನ್ನಷ್ಟು ಭವ್ಯ ಹಾಗೂ ದಿವ್ಯವಾಗಿ ಆಯೋಜಿಸಲಾಗುತ್ತಿದೆ. ಮಂಗಳೂರು, ಸುರತ್ಕಲ್, ಉಡುಪಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಭಕ್ತರು ಈ ಮಹೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಈ ರಥಯಾತ್ರೆಯ ವಿಶೇಷತೆ ಎಂದರೆ ಶ್ರೀ ಜಗನ್ನಾಥ, ಶ್ರೀ ಬಲದೇವ ಹಾಗೂ ಶ್ರೀ ಸುಭದ್ರಾ ದೇವಿಯವರು ದೇವಾಲಯದಿಂದ ಹೊರಬಂದು ಪ್ರತಿಯೊಬ್ಬರಿಗೂ ತಮ್ಮ ಕೃಪಾಕಟಾಕ್ಷವನ್ನು ನೀಡುತ್ತಾರೆ ಎಂಬುದು. ಜಾತಿ, ಮತ, ಪಂಥ, ಭಾಷೆ ಅಥವಾ ರಾಷ್ಟ್ರೀಯತೆಯ ಯಾವುದೇ ಭೇದವಿಲ್ಲದೆ ಎಲ್ಲರನ್ನೂ ಭಗವಂತನ ಪ್ರೀತಿಯ ಅಡಿಯಲ್ಲಿ ಒಗ್ಗೂಡಿಸುವ ವಿಶ್ವಮಾನವೀಯ ಸಂದೇಶವನ್ನು ಈ ಉತ್ಸವ ಸಾರುತ್ತದೆ.
ರಥಯಾತ್ರೆಯು ಸಂಜೆ 4.00 ಗಂಟೆಗೆ ಸುರತ್ಕಲ್ ಜಂಕ್ಷನ್‌ನಿಂದ ಪ್ರಾರಂಭವಾಗಿ ಇಸ್ಕಾನ್ ಮಂಗಳೂರು ಕುಳಾಯಿ ದೇವಸ್ಥಾನದವರೆಗೆ ಸಾಗಲಿದೆ.

ರಥಯಾತ್ರೆಯ ನಂತರ ಸಂಜೆ 7.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಕರ್ನಾಟಕದ ಹೆಮ್ಮೆಯ ಜಾನಪದ ಕಲೆಯಾದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಗೀತ, ನೃತ್ಯ, ಅಭಿನಯ ಹಾಗೂ ಪೌರಾಣಿಕ ಕಥಾನಕಗಳ ಸಂಯೋಜನೆಯಾದ ಈ ಕಾರ್ಯಕ್ರಮವು ಭಕ್ತರು ಹಾಗೂ ಕಲಾಭಿಮಾನಿಗಳಿಗೆ ವಿಶೇಷ ಆಕರ್ಷಣೆಯಾಗಲಿದೆ. ಎಲ್ಲಾ ಭಕ್ತರು ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಪ್ರಸಾದವನ್ನು ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸರ್ವನಾಥ ದಾಸ, ಶ್ರಿವಾಸ್ ದಾಸ ಉಪಸ್ಥಿತರಿದ್ದರು.
