ಅನಿ ಮಂಗಳೂರು ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ; ನಕಲಿ ಐಡಿ ದಂಧೆಯ ಸಮಗ್ರ ತನಿಖೆಗೆ ನವಹಸಜ ಸಂಘಟನೆ ಒತ್ತಾಯ

ಮಂಗಳೂರು: ನಕಲಿ ಟ್ರಾನ್ಸ್‌ಜೆಂಡರ್ ಗುರುತಿನ ಚೀಟಿ ದಂಧೆ; ಸಮಗ್ರ ತನಿಖೆಗೆ ನವಹಸಜ ಸಮುದಾಯ ಸಂಘಟನೆ ಆಗ್ರಹ

ಮಂಗಳೂರು: ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸರ್ಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಹಾಗೂ ಸಮುದಾಯದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಘಟನೆಗಳನ್ನು ಖಂಡಿಸಿ ʻನವಹಸಜ ಸಮುದಾಯ ಸಂಘಟನೆ’ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ, ನಕಲಿ ಗುರುತಿನ ಚೀಟಿ ಪಡೆದವರ ವಿರುದ್ಧ ಹಾಗೂ ಅದಕ್ಕೆ ಸಹಕರಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಒತ್ತಾಯಿಸಿದೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಅಧ್ಯಕ್ಷೆ ನಿಖಿಲಾ, “ಮೂಲತಃ ರಾಯಚೂರಿನ ಅನಿ ಮಂಗಳೂರು ಎಂಬಾಕೆ ಕಳೆದ 4-5 ವರ್ಷಗಳಿಂದ ಮಂಗಳೂರಿನಲ್ಲಿದ್ದಾಳೆ. ಈಕೆ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಮೈಸೂರಿನ ಅಪರಿಚಿತ ವ್ಯಕ್ತಿಯೊಬ್ಬನನ್ನು ಮಂಗಳೂರಿಗೆ ಕರೆಸಿಕೊಂಡಿದ್ದಾಳೆ. ಸಂಘಟನೆಗೆ ಯಾವುದೇ ಮಾಹಿತಿ ನೀಡದೆ, ಆ ವ್ಯಕ್ತಿಗೆ ಮಂಗಳೂರಿನ ವಿಳಾಸದಲ್ಲಿ ನಕಲಿ ಆಧಾರ ಕಾರ್ಡ್ ಹಾಗೂ ಮಹಿಳಾ ಅಭಿವೃದ್ಧಿ ನಿಗಮಕ್ಕೆ ತಪ್ಪು ಮಾಹಿತಿ ನೀಡಿ ರಾಷ್ಟ್ರೀಯ ಟ್ರಾನ್ಸ್‌ಜೆಂಡರ್ ಗುರುತಿನ ಚೀಟಿ ಮಾಡಿಸಿಕೊಟ್ಟಿದ್ದಾಳೆ. ಆ ವ್ಯಕ್ತಿ ಈಗ ಮೈಸೂರಿಗೆ ಓಡಿ ಹೋಗಿ, ಮಂಗಳೂರಿನ ಸಮುದಾಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾನೆ. ಈ ವಿಚಾರಕ್ಕೂ ನಮ್ಮ ಸಂಘಟನೆಗೂ ಯಾವುದೇ ಸಂಬಂಧವಿಲ್ಲ,” ಎಂದು ಸ್ಪಷ್ಟಪಡಿಸಿದರು.

ಮುಂದುವರಿದು ಮಾತನಾಡಿದ ಅವರು, “ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ 50 ಮಂದಿಗೆ ಟಿಜಿ ಕಾರ್ಡ್ ಸಿಕ್ಕಿರುವುದು ತಿಳಿದುಬಂದಿದೆ. ಅದರಲ್ಲಿ ಅನೇಕ ಕಾರ್ಡ್‌ಗಳು ನಕಲಿಯಾಗಿವೆ (Fake) ಎಂಬ ಸಂಶಯ ನಮಗಿದೆ. ಹೆಣ್ಣೂ ಅಲ್ಲದ, ಗಂಡೂ ಅಲ್ಲದ ಅನಿಶ್ಚಿತತೆಯಲ್ಲಿರುವ ನೈಜ ಸಮುದಾಯದವರಿಗೆ ಅನ್ಯಾಯವಾಗುತ್ತಿದೆ. ಸುಲಭವಾಗಿ ಹಣ ಗಳಿಸಲು ಭಿಕ್ಷಾಟನೆಗೆ ಇಳಿಯುವ ಉದ್ದೇಶದಿಂದ ನಕಲಿ ಕಾರ್ಡ್‌ಗಳನ್ನು ಮಾಡಿಸಲಾಗುತ್ತಿದೆ. ಡಿಸಿಯವರು ಈ ಬಗ್ಗೆ ಮಹಿಳಾ ಅಭಿವೃದ್ಧಿ ನಿಗಮದೊಂದಿಗೆ ಕುಳಿತು ವೆರಿಫಿಕೇಶನ್ ಮಾಡಲು ಸೂಚಿಸಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ತನಿಖೆಯಾಗಿ ಶಿಕ್ಷೆಯಾಗಬೇಕು,” ಎಂದರು.

“ಮಂಗಳೂರಿನಲ್ಲಿ ಮೊದಲು ಸ್ಥಳೀಯರು ಮಾತ್ರ ಇದ್ದರು. ಆದರೆ ಈಗ ಹೊರ ಜಿಲ್ಲೆಯವರು ಮತ್ತು ಹಿಂದಿ ಭಾಷಿಕರು ಹೆಚ್ಚಾಗಿದ್ದಾರೆ. ಭಿಕ್ಷಾಟನೆ ಮಾಡಿದರೆ ಸುಲಭವಾಗಿ ಹಣ ಸಂಪಾದಿಸಬಹುದು ಎಂದು ತಿಳಿದು, ಸಮುದಾಯದ ವೇಷ ಹಾಕಿ ಸಿಗ್ನಲ್‌ಗಳಲ್ಲಿ ನಿಲ್ಲುತ್ತಿದ್ದಾರೆ. ಇವರಿಗೆ ಒಬ್ಬ ʻಗುರು’ ಇದ್ದು ಒಂದು ತಂಡವಾಗಿ ನಡೆಸುತ್ತಿದ್ದಾರೆ. ಕೆಲವರು ಬೈ ಸೆಕ್ಸುವಲ್ ಆಗಿದ್ದು, ಹೆಂಡತಿ ಮಕ್ಕಳಿದ್ದರೂ ಟಿಜಿ ಕಾರ್ಡ್ ಪಡೆದಿದ್ದಾರೆ. ಇಂತಹವರಿಂದ ನೈಜ ಮಂಗಳಮುಖಿಯರಿಗೆ ತೊಂದರೆಯಾಗುತ್ತಿದೆ. ನಾವು ಕಲೆಕ್ಷನ್‌ಗೆ ಹೋಗುವುದನ್ನು ನಿಲ್ಲಿಸಿದ್ದೇವೆ, ಆದರೆ ಈ ನಕಲಿ ಗ್ಯಾಂಗ್‌ಗಳಿಂದಾಗಿ ನಮಗೆ ಸಮಾಜದಲ್ಲಿ ಕೆಟ್ಟ ಹೆಸರು ಬರುತ್ತಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನಿ ನಮ್ಮ ಸಂಘಟನೆಯ ಬೋರ್ಡ್ ಮೆಂಬರ್ ಆಗಿದ್ದರೂ, ನಂಜನಗೂಡಿನ ವ್ಯಕ್ತಿಗೆ ಐಡಿ ಮಾಡಿಸಿಕೊಟ್ಟ ಬಗ್ಗೆ ನಮಗೆ ಮಾಹಿತಿ ಮುಚ್ಚಿಟ್ಟಿದ್ದಾಳೆ. ಆಕೆಯ ಅಕ್ರಮಕ್ಕೆ ಸಾಥ್ ನೀಡಿದವರು ಯಾರು ಎಂಬುದು ತನಿಖೆಯಾಗಬೇಕು. ಅಷ್ಟೇ ಅಲ್ಲದೆ, ಐಡಿ ಕಾರ್ಡ್ ಕಳೆದುಹೋಗಿದೆ ಎಂದು ಆಕೆ ಸುಳ್ಳು ಹೇಳುತ್ತಿದ್ದಾಳೆ; ಕಳೆದುಹೋಗಿದ್ದರೆ ದೂರು ನೀಡಬೇಕಿತ್ತಲ್ಲವೇ? ಯಾರೋ ಮಾಡಿದ ತಪ್ಪಿಗೆ ಇಡೀ ಸಮುದಾಯ ಬಲಿಯಾಗಬಾರದು. ದಕ್ಷಿಣ ಕನ್ನಡ ಜಿಲ್ಲೆಯ ನೈಜ ಮಂಗಳಮುಖಿಯರಿಗೆ ಮಾತ್ರ ನ್ಯಾಯ ಸಿಗಬೇಕು,” ಎಂದು ನಿಖಿಲಾ ಅವರು ತಮ್ಮ ಆಗ್ರಹವನ್ನು ಮಂಡಿಸಿದರು.


ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
ಸಂಘಟನೆಯ ಕಾರ್ಯದರ್ಶಿ ಅರುಂಧತಿ ಮಾತನಾಡಿ, “ಜಿಲ್ಲೆಯಲ್ಲಿ ನಮ್ಮ ಸಂಘಟನೆ ದಶಕಗಳಿಂದ ಸಕ್ರಿಯವಾಗಿದೆ. ಈ ಮೊದಲು ವಕೀಲರ ಅಫಿಡವಿಟ್ ಮೂಲಕ ಗುರುತಿನ ಚೀಟಿ ಸಿಗುತ್ತಿತ್ತು, ಆದರೆ ಈಗ ಏಪ್ರಿಲ್ 1 ರಿಂದ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯವಾಗಿದೆ. ಇದನ್ನು ತಪ್ಪಿಸಲು ಕೆಲವರು ನಕಲಿ ದಾಖಲೆಗಳ ಮೂಲಕ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಡ್ ಮಾಡಿಸಿಕೊಳ್ಳುತ್ತಿದ್ದಾರೆ. ಇದೊಂದು ವ್ಯವಹಾರವಾಗಿ ಮಾರ್ಪಟ್ಟಿದೆ. ಹೊರಗಿನಿಂದ ಬಂದವರು ಇಲ್ಲಿ ಸಂಪಾದನೆ ಮಾಡಿ ತಮ್ಮ ಊರಿನಲ್ಲಿ ಹೆಂಡತಿ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಇದು ನೈಜ ಸಮುದಾಯದವರ ತಟ್ಟೆಯ ಅನ್ನ ಕಸಿಯುವ ಕೆಲಸ,” ಎಂದು ಬೇಸರ ವ್ಯಕ್ತಪಡಿಸಿದರು.

ಬೋರ್ಡ್ ಸದಸ್ಯೆ ಪ್ರೇಮಾ ಮಾತನಾಡಿ, “ಹೊರ ರಾಜ್ಯಗಳಿಂದ ಬಂದವರು ಇಲ್ಲಿ ಕೆಲವೇ ದಿನಗಳಿದ್ದು, ಹಣ ಮಾಡಿಕೊಂಡು ಹೋಗುತ್ತಿದ್ದಾರೆ. ಇವರಿಗೆ ಒಬ್ಬ ʻಗುರು’ ಎಂಬುವವರು ಇರುತ್ತಾರೆ, ಅವರೇ ಇಂತಹ ನಕಲಿ ದಾಖಲೆಗಳನ್ನು ಸಿದ್ಧಪಡಿಸಿಕೊಡುತ್ತಾರೆ. ಇಂತಹ ವ್ಯವಸ್ಥಿತ ಜಾಲದ ಬಗ್ಗೆ ಸಮಗ್ರ ತನಿಖೆಯಾಗಬೇಕು. ನಮ್ಮ ಸಮುದಾಯದ ಘನತೆಗೆ ಧಕ್ಕೆ ತರುವ ಇಂತಹ ಘಟನೆಗಳು ಮರುಕಳಿಸಬಾರದು,” ಎಂದರು.

ಸದಸ್ಯೆ ದಿಶಾ ಮಾತನಾಡಿ, “ನಾವು ಮಂಗಳೂರಿನಲ್ಲೇ ಹುಟ್ಟಿ ಬೆಳೆದವರು. ಈ ನಗರದಲ್ಲಿ ನಮಗೆ ಗೌರವವಿದೆ. ಆದರೆ ಸಂಪಾದನೆಗಾಗಿಯೇ ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬಂದು, ನಕಲಿ ಐಡಿ ಸೃಷ್ಟಿಸಿಕೊಂಡು ಜೀವನ ಮಾಡುವವರಿಂದ ಮಂಗಳೂರಿಗೆ ಕಪ್ಪು ಚುಕ್ಕೆ ಬರುತ್ತಿದೆ. ಇಂತಹ ನಕಲಿ ವ್ಯಕ್ತಿಗಳನ್ನು ಪತ್ತೆಹಚ್ಚಿ ಅವರ ಗುರುತಿನ ಚೀಟಿಗಳನ್ನು ರದ್ದುಪಡಿಸಬೇಕು,” ಎಂದು ಒತ್ತಾಯಿಸಿದರು.

ನಿಮ್ಮ ಎಲ್ಲಾ ರೀತಿಯ ಡಾಕ್ಯುಮೆಂಟೇಶನ್ ಮತ್ತು ಲೀಗಲ್ ಸರ್ವಿಸ್‌ ಅಗತ್ಯತೆಗಾಗಿ ಈಗಲೇ ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಗ್ರೂಪ್ ಸೇರಿಕೊಳ್ಳಿ.

ಸಮುದಾಯದ ಹೆಸರಿನಲ್ಲಿ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುತ್ತಿರುವ ಗ್ಯಾಂಗ್‌ಗಳ ಬಗ್ಗೆ ಸಂಘಟನೆ ಆಕ್ರೋಶ ವ್ಯಕ್ತಪಡಿಸಿತು. ನೈಜ ಲಿಂಗತ್ವ ಅಲ್ಪಸಂಖ್ಯಾತರು ಅಂತಹ ಕೆಲಸಗಳಲ್ಲಿ ತೊಡಗಿಲ್ಲ, ಆದರೆ ಕೆಲವರು ಸಮುದಾಯದ ವೇಷ ಧರಿಸಿ ಜನರನ್ನು ವಂಚಿಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದ್ದು, ಅನಿ ಮಂಗಳೂರು ಎಂಬಾಕೆಯ ಮೇಲೆ ಕೇಳಿಬಂದಿರುವ ಆರೋಪಗಳ ಬಗ್ಗೆಯೂ ನಿಷ್ಪಕ್ಷಪಾತ ತನಿಖೆಯಾಗಲಿ ಎಂದು ಸಂಘಟನೆ ವಿನಂತಿಸಿದೆ.

ಸುದ್ದಿಗೋಷ್ಠಿಯಲ್ಲಿ ಬೋರ್ಡ್ ಸದಸ್ಯೆಯರಾದ ಖುಷಿ ಹಾಗೂವೃಂದಾ ನಾಯಕ್ ಉಪಸ್ಥಿತರಿದ್ದರು.

error: Content is protected !!