ಮಂಗಳೂರು: ಅರಬ್ಬೀ ಸಮುದ್ರದ ತೀರದಲ್ಲಿರುವ ನವ ಮಂಗಳೂರು ಬಂದರಿಗೆ ಮಾರ್ಚ್ 22ರಂದು ಅಮೆರಿಕದ ಟೆಕ್ಸಾಸ್‌ನಿಂದ ʻಪಿಕ್ಸಿಸ್ ಪಾಯಿನೀರ್’ ಎಂಬ ದೈತ್ಯ ಹಡಗು 47,236 ಟನ್ ಎಲ್‌ಪಿಜಿ ಹೊತ್ತು ಬಂದಿಳಿದಿತ್ತು. ಇದು ಕೇವಲ ಒಂದು ಹಡಗಿನ ಆಗಮನವಲ್ಲ, ಬದಲಿಗೆ ಮಂಗಳೂರಿನ ಭೂಗರ್ಭದಲ್ಲಿ ಅಡಗಿರುವ ಭಾರತದ ಇಂಧನ ಭದ್ರತೆಯ ಬ್ರಹ್ಮಾಸ್ತ್ರಕ್ಕೆ ಶಕ್ತಿ ತುಂಬುವ ಪ್ರಕ್ರಿಯೆಯಾಗಿತ್ತು.

ಏನಿದು ರಾಕ್ ಕೇವರ್ನ್ ವಿಸ್ಮಯ?
ನಮ್ಮ ಮನೆಯ ಅಡುಗೆ ಕೋಣೆಯಲ್ಲಿರುವ ಎಲ್‌ಪಿಜಿ ಸಿಲಿಂಡರ್‌ಗಳ ಸುರಕ್ಷತೆಯ ಬಗ್ಗೆ ನಾವೆಲ್ಲಾ ಯೋಚಿಸುತ್ತೇವೆ. ಆದರೆ ಮಂಗಳೂರಿನ ಕಾಟಿಪಳ್ಳ ಸಮೀಪದ ಬಾಳ ಎಂಬಲ್ಲಿ ಭೂಮಿಯ ಮೇಲ್ಮೈಯಿಂದ ಸುಮಾರು 156 ಮೀಟರ್ ಆಳದಲ್ಲಿ (ಅಂದರೆ ಸುಮಾರು 50 ಅಂತಸ್ತಿನ ಕಟ್ಟಡದಷ್ಟು ಆಳ) ಗಟ್ಟಿಯಾದ ಶಿಲೆಗಳನ್ನು ಕೊರೆದು ಬೃಹತ್ ಸುರಂಗಗಳನ್ನು ನಿರ್ಮಿಸಲಾಗಿದೆ. ಇದೇ ಭಾರತದ ಅತಿದೊಡ್ಡ ಭೂಗತ ಎಲ್‌ಪಿಜಿ ಶೇಖರಣಾ ಸುರಂಗ ಅಥವಾ ʻರಾಕ್ ಕೇವರ್ನ್’.

ಹೈಡ್ರಾಲಿಕ್ ಕಂಟೈನ್‌ಮೆಂಟ್: ವಿಜ್ಞಾನದ ಪವಾಡ!
ಈ ಸುರಂಗದ ಒಳಗಿನ ತಂತ್ರಜ್ಞಾನ ನಿಜಕ್ಕೂ ಬೆರಗುಗೊಳಿಸುವಂತಿದೆ. ಇಲ್ಲಿ ಅನಿಲವು ಹೊರಹೋಗದಂತೆ ತಡೆಯಲು ಕಬ್ಬಿಣದ ಟ್ಯಾಂಕ್‌ಗಳಿಗಿಂತ ಹೆಚ್ಚಾಗಿ ನೈಸರ್ಗಿಕ ಅಂತರ್ಜಲದ ಒತ್ತಡವನ್ನೇ ಬಳಸಲಾಗಿದೆ. ಇದನ್ನು ʻಹೈಡ್ರಾಲಿಕ್ ಕಂಟೈನ್‌ಮೆಂಟ್’ ಎಂದು ಕರೆಯಲಾಗುತ್ತದೆ. ಅನಿಲವು ಕಲ್ಲಿನ ಸಣ್ಣ ಬಿರುಕುಗಳ ಮೂಲಕವೂ ಸೋರಿಕೆಯಾಗದಂತೆ ತಡೆಯಲು 13 ಕಿಲೋಮೀಟರ್ ಉದ್ದದ ರಂಧ್ರಗಳ ಮೂಲಕ ವಾಟರ್ ಕರ್ಟನ್’ ಎಂಬ ನೀರಿನ ರಕ್ಷಣಾ ಗೋಡೆಯನ್ನು ನಿರ್ಮಿಸಲಾಗಿದೆ.

ಭಾರತದ ಇಂಧನ ಲೋಕದ ಅದ್ಭುತ!
ಬಾಳದಲ್ಲಿ ತಲೆಎತ್ತಿರುವ ಈ ಬೃಹತ್ ಭೂಗತ ಎಲ್‌ಪಿಜಿ ಶೇಖರಣಾ ಸುರಂಗವು ಭಾರತದ ಇಂಧನ ಭದ್ರತೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಸುಮಾರು 800 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಯೋಜನೆಯನ್ನು ಸರ್ಕಾರಿ ಸ್ವಾಮ್ಯದ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಿದ್ದರೆ, ಮೇಘಾ ಎಂಜಿನಿಯರಿಂಗ್ ಸಂಸ್ಥೆಯು ಇದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ.
ಭೂಮಿಯ ಆಳದಲ್ಲಿ ಗಟ್ಟಿಯಾದ ಶಿಲೆಗಳನ್ನು ಕೊರೆದು ನಿರ್ಮಿಸಲಾದ ಈ ಸುರಂಗವು ಬರೋಬ್ಬರಿ 80,000 ಮೆಟ್ರಿಕ್ ಟನ್ ಅನಿಲವನ್ನು ಶೇಖರಿಸಿಡುವ ದೈತ್ಯ ಸಾಮರ್ಥ್ಯವನ್ನು ಹೊಂದಿದೆ. ಕೇವಲ ಸಂಗ್ರಹಣೆಯಷ್ಟೇ ಅಲ್ಲದೆ, ಇಲ್ಲಿಂದ ಅತ್ಯಾಧುನಿಕ ಪೈಪ್‌ಲೈನ್‌ಗಳ ಮೂಲಕ ಮೈಸೂರು, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಪ್ರಮುಖ ನಗರಗಳಿಗೆ ನಿರಂತರವಾಗಿ ಅಡುಗೆ ಅನಿಲ ಪೂರೈಕೆಯಾಗಲಿದ್ದು, ದಕ್ಷಿಣ ಭಾರತದ ಲಕ್ಷಾಂತರ ಮನೆಗಳಿಗೆ ಈ ಯೋಜನೆ ಆಸರೆಯಾಗಲಿದೆ.

ಯುದ್ಧ ಬಂದರೂ ನಮಗೆ ಅಡುಗೆ ಅನಿಲದ ಕೊರತೆಯಿಲ್ಲ!
ಈ ಭೂಗತ ಸುರಂಗಗಳು ಕೇವಲ ಸಂಗ್ರಹಣಾ ಕೇಂದ್ರಗಳಲ್ಲ, ಇವು ದೇಶದ ಇಂಧನ ಮೀಸಲು ಪಡೆಗಳು (Strategic Reserves). ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲದ ಬೆಲೆ ಗಗನಕ್ಕೇರಿದಾಗ ಅಥವಾ ಯುದ್ಧದಂತಹ ತುರ್ತು ಪರಿಸ್ಥಿತಿಯಲ್ಲಿ ದೇಶದ ಜನರಿಗೆ ಅಡುಗೆ ಅನಿಲದ ಕೊರತೆಯಾಗದಂತೆ ಈ ಕೇಂದ್ರ ರಕ್ಷಣೆ ನೀಡಲಿದೆ. ವಿಶಾಖಪಟ್ಟಣಂ ಮತ್ತು ಪಾದೂರಿನಲ್ಲಿ ಕಚ್ಚಾ ತೈಲ ಸಂಗ್ರಹಣಾ ಕೇಂದ್ರಗಳಿದ್ದರೆ, ಎಲ್‌ಪಿಜಿಗಾಗಿ ಇಂತಹ ಬೃಹತ್ ವ್ಯವಸ್ಥೆ ಇರುವುದು ಮಂಗಳೂರಿನಲ್ಲಿ ಮಾತ್ರ. ಇದು ದಕ್ಷಿಣ ಭಾರತದ ಇಂಧನ ಭದ್ರತೆಯ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದೆ.
