ನವದೆಹಲಿ: ಪರಿಶಿಷ್ಟ ಜಾತಿಯ (Scheduled Caste) ಮೀಸಲಾತಿ ಸವಲತ್ತುಗಳು ಕೇವಲ ಧರ್ಮಕ್ಕೆ ಸೀಮಿತವೇ ಅಥವಾ ಹುಟ್ಟಿನ ಆಧಾರದ ಮೇಲೆಯೇ? ಈ ದಶಕಗಳ ಕಾಲದ ಚರ್ಚೆಗೆ ಸುಪ್ರೀಂ ಕೋರ್ಟ್ ಈಗ ಸ್ಪಷ್ಟ ಮತ್ತು ಕಟುವಾದ ತೀರ್ಪು ನೀಡಿದೆ. ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಅನ್ಯ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿ ಇನ್ನು ಮುಂದೆ ʻಪರಿಶಿಷ್ಟ ಜಾತಿ’ಯ ಸದಸ್ಯನಾಗಿ ಉಳಿಯಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠ ಸ್ಪಷ್ಟಪಡಿಸಿದೆ.

ಈ ಇಡೀ ಪ್ರಕರಣ ಶುರುವಾಗಿದ್ದು ಒಬ್ಬ ಪಾದ್ರಿಯಿಂದ. ತಾನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ವರ್ಷಗಳೇ ಕಳೆದಿದ್ದರೂ, ಹಳೆಯ ಎಸ್‌ಸಿ (SC) ಸರ್ಟಿಫಿಕೇಟ್ ಬಳಸಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಆತ ಮುಂದಾಗಿದ್ದರು. ಆದರೆ, “ನೀವು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಮೇಲೆ ಜಾತಿ ವ್ಯವಸ್ಥೆಯೇ ಇಲ್ಲದ ಧರ್ಮದ ಅನುಯಾಯಿಯಾಗಿದ್ದೀರಿ, ಹೀಗಿರುವಾಗ ಜಾತಿ ಆಧಾರಿತ ಕಾಯ್ದೆಯ ರಕ್ಷಣೆ ನಿಮಗೆ ಸಿಗಲು ಹೇಗೆ ಸಾಧ್ಯ?” ಎಂದು ಕೋರ್ಟ್ ಪ್ರಶ್ನಿಸಿದೆ.

ಆಂಧ್ರಪ್ರದೇಶ ಮತ್ತು ಅಲಹಾಬಾದ್ ಹೈಕೋರ್ಟ್‌ಗಳ ತೀರ್ಪನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, ಮತಾಂತರದ ನಂತರವೂ ಎಸ್‌ಸಿ ಮೀಸಲಾತಿ ಪಡೆಯುವುದನ್ನು “ಸಂವಿಧಾನಕ್ಕೆ ಎಸಗಿದ ದ್ರೋಹ” (Fraud on the Constitution) ಎಂದು ಕರೆದಿದೆ. 1950ರ ಸಂವಿಧಾನದ ಆದೇಶದ ಪ್ರಕಾರ, ಎಸ್‌ಸಿ ಸ್ಥಾನಮಾನ ಸಿಗುವುದು ಕೇವಲ ಮೂರು ಧರ್ಮದವರಿಗೆ ಮಾತ್ರ. ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಕ್ಕೆ ಹೋದರೆ, ಹುಟ್ಟಿನಿಂದ ಬಂದ ಜಾತಿ ಗುರುತು ಅಲ್ಲಿಗೆ ಕೊನೆಯಾಗುತ್ತದೆ ಎಂಬುದು ಕಾನೂನಿನ ಸಾರ.

ಅಲಹಾಬಾದ್ ಹೈಕೋರ್ಟ್ ಈಗಾಗಲೇ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಮತಾಂತರಗೊಂಡ ಮೇಲೆಯೂ ಎಸ್‌ಸಿ ಸವಲತ್ತು ಪಡೆಯುತ್ತಿರುವವರನ್ನು ಗುರುತಿಸಿ, ಅಂತಹ ಪ್ರಕರಣಗಳನ್ನು 4 ತಿಂಗಳೊಳಗೆ ಇತ್ಯರ್ಥಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಕ್ರೈಸ್ತ ಧರ್ಮದಲ್ಲಿ ಜಾತಿ ತಾರತಮ್ಯಕ್ಕೆ ಅವಕಾಶವಿಲ್ಲದಿರುವುದರಿಂದ, ಅಲ್ಲಿಗೆ ಹೋದವರು ಅಲ್ಪಸಂಖ್ಯಾತ ಸ್ಥಾನಮಾನ ಪಡೆಯಬಹುದೇ ಹೊರತು ಪರಿಶಿಷ್ಟ ಜಾತಿಯ ಮೀಸಲಾತಿಯನ್ನಲ್ಲ ಎಂಬುದು ಈಗ ಅಂತಿಮವಾಗಿದೆ.
