ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ರೋಡ್ ರೋಲರ್ ಹರಿದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮೇ 9ರ ಶನಿವಾರದಂದು ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಬಳಿ ಸಂಭವಿಸಿದೆ.

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಂಗವಾಗಿ ಗಾಂಧಿ ಪಾರ್ಕ್ ಸಮೀಪ ಸರ್ವೀಸ್ ರಸ್ತೆಯ ಕೆಲಸ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಅಜಾಗರೂಕತೆಯಿಂದ ರೋಡ್ ರೋಲರ್ ಚಲಿಸಿದೆ ಎನ್ನಲಾಗಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ರೋಡ್ ರೋಲರ್ ಅಡಿಯಲ್ಲಿ ಸಿಲುಕಿದ ವ್ಯಕ್ತಿಯ ದೇಹವು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತಪಟ್ಟ ವ್ಯಕ್ತಿಯನ್ನು ಉತ್ತರ ಭಾರತ ಮೂಲದ ಕಾರ್ಮಿಕ ಎಂದು ಅಂದಾಜಿಸಲಾಗಿದ್ದು, ಅವರ ನಿಖರವಾದ ಹೆಸರು ಮತ್ತು ವಿಳಾಸದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
