
ನವದೆಹಲಿ: ಐಪಿಎಲ್ ಪಂದ್ಯ ವೀಕ್ಷಿಸಿ ಮನೆಗೆ ತೆರಳುತ್ತಿದ್ದ ವೇಳೆ ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಈಶಾನ್ಯ ದೆಹಲಿಯ ಖಜುರಿ ಖಾಸ್ ಪ್ಲೈಓವರ್ ಬಳಿ ನಡೆದಿದೆ.

ಈಶಾನ್ಯ ದೆಹಲಿಯ ಕರವಾಲ್ ನಗರ ಪ್ರದೇಶದ ನಿವಾಸಿಗಳಾದ ಹೇಮಂತ್ ತಿವಾರಿ ಮತ್ತು ರೋಹಿತ್ ಅಲಿಯಾಸ್ ಸೋನು ಮೃತ ಸವಾರರು.

ಫ್ಲೈಓವರ್‌ನಿಂದ ಕೆಳಗೆ ಬರುತ್ತಿದ್ದಂತೆ ವೇಗವಾಗಿ ಬಂದ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ತೀವ್ರತೆಗೆ ಇಬ್ಬರೂ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಅಪಘಾತವೆಸಗಿದ ಆರೋಪಿ ಕಾರು ಚಾಲಕ ಹಿಮಾಂಶುವನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.