ಮಂಗಳೂರು: ಉಳ್ಳಾಲದ ಕುತ್ತಾರಿನಲ್ಲಿರುವ ಕೊರಗಜ್ಜನ ಆದಿಸ್ಥಳಕ್ಕೆ ತೆರಳುವ ಪ್ರಮುಖ ಜಂಕ್ಷನ್‌ನಲ್ಲಿರುವ ʻಕೊರಗಜ್ಜನ ವೃತ್ತ’ದ ನವೀಕರಣ ವಿಚಾರ ಈಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಈ ವೃತ್ತವನ್ನು ಖಾಸಗಿ ಸಂಸ್ಥೆಯೊಂದು ನವೀಕರಿಸಲು ಮುಂದಾದಾಗ, ಸ್ಥಳೀಯ ಅಲ್ಪಸಂಖ್ಯಾತ ಸಮುದಾಯದ ಗುಂಪೊಂದು ಶಾಸಕ ಹಾಗೂ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಘೇರಾವ್ ಹಾಕಿ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಕುತ್ತಾರು ಜಂಕ್ಷನ್‌ನಲ್ಲಿ ಈಗಾಗಲೇ ಕೊರಗಜ್ಜನ ಹೆಸರಿನ ವೃತ್ತವಿದ್ದು, ಅದನ್ನು ಸುಂದರಗೊಳಿಸಲು ನವೀಕರಣ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಆದರೆ, ಇದಕ್ಕೆ ಒಂದು ವರ್ಗದ ಜನರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಹರಡಿರುವುದು ಸ್ಥಳೀಯವಾಗಿ ಕುತೂಹಲ ಮೂಡಿಸಿದೆ.

ಈ ವಿವಾದದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಯು.ಟಿ. ಖಾದರ್ ಅವರು ಗೊಂದಲಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ. “ಕುತ್ತಾರು, ಮದನಿನಗರ ಮತ್ತು ಸುಭಾಶ್‌ನಗರದ ಜನರು ಸದಾ ಒಗ್ಗಟ್ಟಿನಿಂದ ಇರುತ್ತಾರೆ. ಇಲ್ಲಿನ ಜನರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ” ಎಂದು ಅವರು ಹೇಳಿದ್ದಾರೆ.

“ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಪ್ರತಿಯೊಂದು ವಿಚಾರಕ್ಕೂ ಉತ್ತರಿಸುವ ಅಗತ್ಯವಿಲ್ಲ. ಯಾರೋ ಒಂದಿಬ್ಬರು ಹೊರಗಿನಿಂದ ಬಂದವರು ವಿವಾದ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಅಂತಹವರ ಮಾತುಗಳಿಗೆ ಮಹತ್ವ ನೀಡಬಾರದು” ಎಂದು ಕಿಡಿಗೇಡಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲವರು ದಾರಿ ತಪ್ಪಿ ಈ ರೀತಿ ವರ್ತಿಸುತ್ತಿರಬಹುದು, ಅವರನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಶೀಘ್ರದಲ್ಲೇ ನವೀಕೃತ ವೃತ್ತವನ್ನು ಅನಾವರಣಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಈ ಮೂಲಕ ಕುತ್ತಾರಿನಲ್ಲಿ ಯಾವುದೇ ಕೋಮು ಸಂಘರ್ಷಕ್ಕೆ ಅವಕಾಶವಿಲ್ಲ ಮತ್ತು ಅಭಿವೃದ್ಧಿ ಕಾರ್ಯಗಳು ಯೋಜಿತ ರೀತಿಯಲ್ಲೇ ನಡೆಯಲಿವೆ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.