ತಿರುನಲ್ವೇಲಿ: ತಮಿಳುನಾಡು ರಾಜಕೀಯದಲ್ಲಿ ವಿಜಯ್ ಅವರ ಟಿ.ವಿ.ಕೆ (TVK) ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಸರ್ಕಾರ ರಚನೆ ಮತ್ತು ವಿಜಯ್ ಅವರ ಪಟ್ಟಾಭಿಷೇಕ ವಿಳಂಬವಾಗುತ್ತಿರುವುದು ಈಗ ಅಭಿಮಾನಿಗಳ ಪ್ರಾಣಕ್ಕೇ ಸಂಚಕಾರ ತಂದೊಡ್ಡುತ್ತಿದೆ. ವಿಜಯ್ ಮುಖ್ಯಮಂತ್ರಿಯಾಗಲು ಆಗುತ್ತಿರುವ ಅಡೆತಡೆಗಳಿಂದ ಮನನೊಂದ ಅಪ್ಪಟ ಅಭಿಮಾನಿಯೊಬ್ಬ ಆತ್ಮಾಹುತಿಗೆ ಯತ್ನಿಸಿದ ದಾರುಣ ಘಟನೆ ತಿರುನಲ್ವೇಲಿಯಲ್ಲಿ ನಡೆದಿದೆ.

ಇಸಕ್ಕಿಯಪ್ಪನ್ (40) ಎಂಬ ಟಿ.ವಿ.ಕೆ ಕಾರ್ಯಕರ್ತನೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಈತ ವಿಜಯ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ನಾಲ್ಕು ತಿಂಗಳ ಹಿಂದೆಯಷ್ಟೇ ತನ್ನ ನೆಚ್ಚಿನ ನಟ ಮುಖ್ಯಮಂತ್ರಿಯಾಗಬೇಕೆಂದು ಹರಕೆ ಹೊತ್ತು, 16 ಅಡಿ ಉದ್ದದ ಭರ್ಜಿಯಿಂದ ತನ್ನ ಎರಡೂ ಕೆನ್ನೆಗಳನ್ನು ಚುಚ್ಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದ.

ಆದರೆ, ಚುನಾವಣಾ ಫಲಿತಾಂಶದ ನಂತರ ಸೃಷ್ಟಿಯಾಗಿರುವ ರಾಜಕೀಯ ಅನಿಶ್ಚಿತತೆ ಮತ್ತು ಟಿ.ವಿ.ಕೆಗೆ ಸರ್ಕಾರ ರಚಿಸಲು ಆಮಂತ್ರಣ ಸಿಗದ ಕಾರಣ ತೀವ್ರ ಬೇಸರಗೊಂಡಿದ್ದ ಇಸಕ್ಕಿಯಪ್ಪನ್, ಇಂದು ಮೈಮೇಲೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾನೆ. ತೀವ್ರ ಸುಟ್ಟ ಗಾಯಗಳಾಗಿರುವ ಆತನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿ.ವಿ.ಕೆ 108 ಸ್ಥಾನಗಳನ್ನು ಗೆದ್ದಿದ್ದರೂ, ಮ್ಯಾಜಿಕ್ ನಂಬರ್ 118 ತಲುಪಲು ಇನ್ನೂ 10 ಸ್ಥಾನಗಳ ಕೊರತೆಯಿದೆ. ಕಾಂಗ್ರೆಸ್ ತನ್ನ 5 ಶಾಸಕರ ಬೆಂಬಲ ಘೋಷಿಸಿದ್ದರೂ, ಇನ್ನೂ 5 ಸ್ಥಾನಗಳ ಅಗತ್ಯವಿದ್ದು, ಇತರ ಸಣ್ಣ ಪಕ್ಷಗಳ ಜೊತೆಗಿನ ಮೈತ್ರಿ ಮಾತುಕತೆ ಇನ್ನೂ ಫಲ ನೀಡಿಲ್ಲ. ಈ ರಾಜಕೀಯ ಹಗ್ಗಜಗ್ಗಾಟದ ನಡುವೆಯೇ ಅಭಿಮಾನಿಯೊಬ್ಬ ಈ ರೀತಿ ವಿಪರೀತ ಹೆಜ್ಜೆ ಇಟ್ಟಿರುವುದು ರಾಜ್ಯದಲ್ಲಿ ಆತಂಕ ಮೂಡಿಸಿದೆ.
