ತಮಿಳುನಾಡಿನಲ್ಲಿ ವಿಜಯ್ ಪಟ್ಟಾಭಿಷೇಕಕ್ಕೆ ಹಾದಿ ಸುಗಮ: ಟಿ.ವಿ.ಕೆಗೆ ವಿಸಿಕೆ ಬೇಷರತ್ ಬೆಂಬಲ, ಮ್ಯಾಜಿಕ್ ನಂಬರ್ 118 ತಲುಪಿದ ದಳಪತಿ!

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕುರಿತು ನಡೆಯುತ್ತಿದ್ದ ಸುದೀರ್ಘ ಕಸರತ್ತಿಗೆ ಇಂದು ಸಂಜೆ ಮಹತ್ವದ ತಿರುವು ಸಿಕ್ಕಿದೆ. ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ವಿಸಿಕೆ (VCK) ಬೇಷರತ್ ಬೆಂಬಲ ಘೋಷಿಸುವ ಮೂಲಕ ಬಹುಮತದ ಕೊರತೆಯನ್ನು ನೀಗಿಸಿದೆ. ಇದರೊಂದಿಗೆ ವಿಜಯ್ ಬಣದ ಸಂಖ್ಯಾಬಲ 118ಕ್ಕೇರಿದ್ದು, ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ಅಧಿಕಾರ ಸ್ವೀಕರಿಸುವುದು ಈಗ ಬಹುತೇಕ ಖಚಿತವಾಗಿದೆ.

ಬಹುಮತದ ಲೆಕ್ಕಾಚಾರ ಹೀಗಿದೆ:
ಸರ್ಕಾರ ರಚಿಸಲು ಅಗತ್ಯವಿರುವ 118 ಶಾಸಕರ ಬಲವನ್ನು ವಿಜಯ್ ಈ ಕೆಳಗಿನಂತೆ ಕ್ರೋಢೀಕರಿಸಿದ್ದಾರೆ:
ಟಿ.ವಿ.ಕೆ (TVK): 107 (ಚುನಾಯಿತ ಶಾಸಕರು)
ಕಾಂಗ್ರೆಸ್: 05
ಎಡಪಕ್ಷಗಳು: 04
ವಿಸಿಕೆ (VCK): 02
ಒಟ್ಟು: 118 (ಸರಳ ಬಹುಮತ)

ವಿಸಿಕೆ ಮುಖ್ಯಸ್ಥ ತಿರುಮಾವಳವನ್ ಅವರು ಟಿ.ವಿ.ಕೆ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಅವರಿಗೆ ಬೆಂಬಲ ಪತ್ರ ಹಸ್ತಾಂತರಿಸಿದ್ದಾರೆ. ವಿಸಿಕೆ ಶಾಸಕರಾದ ವನ್ನಿ ಅರಸು ಮತ್ತು ಜ್ಯೋತಿಮಣಿ ಸಹಿ ಹಾಕಿರುವ ಬೆಂಬಲ ಪತ್ರವನ್ನು ಈಗಾಗಲೇ ರಾಜ್ಯಪಾಲರಿಗೂ ರವಾನಿಸಲಾಗಿದೆ. ಈ ಬೆಳವಣಿಗೆಯಿಂದಾಗಿ ಟಿ.ವಿ.ಕೆ ಪಾಳಯದಲ್ಲಿ ಸಂಭ್ರಮ ಮನೆಮಾಡಿದ್ದು, ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸುತ್ತಿದ್ದಾರೆ.

ಬಹುಮತ ಸಾಬೀತುಪಡಿಸಲು ಅಗತ್ಯವಿರುವ ದಾಖಲೆಗಳು ಕೈಸೇರುತ್ತಿದ್ದಂತೆಯೇ ವಿಜಯ್ ಅವರು ತಮ್ಮ ಚೆನ್ನೈ ನಿವಾಸದಿಂದ ರಾಜಭವನದತ್ತ ಹೊರಟಿದ್ದಾರೆ. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಇಂದು ಸಂಜೆ 7:10ಕ್ಕೆ ಕೇರಳದ ತಿರುವನಂತಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರು ಹೊರಡುವ ಮುನ್ನವೇ (ಸಂಜೆ 5:45ರ ಸುಮಾರಿಗೆ) ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ವಿಜಯ್ ಸಿದ್ಧತೆ ನಡೆಸಿದ್ದಾರೆ.

ದಶಕಗಳ ಕಾಲ ದ್ರಾವಿಡ ಪಕ್ಷಗಳ ಅಧಿಪತ್ಯವಿದ್ದ ತಮಿಳುನಾಡಿನಲ್ಲಿ ಈಗ ಹೊಸ ಯುಗ ಆರಂಭವಾಗುತ್ತಿದ್ದು, ಚಿತ್ರರಂಗದ ಸೂಪರ್‌ಸ್ಟಾರ್ ಒಬ್ಬರು ರಾಜ್ಯದ ಚುಕ್ಕಾಣಿ ಹಿಡಿಯುತ್ತಿರುವುದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.

error: Content is protected !!