ವಿಟ್ಲ: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ವಿಟ್ಲ ಪೊಲೀಸರು ಇಂದು ಕೇರಳದ ಮಂಜೇಶ್ವರದಲ್ಲಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳ ರಾಜ್ಯದ ಮಂಜೇಶ್ವರ ನಿವಾಸಿ ಮೊಹಮ್ಮದ್ ಫಯಾಜ್ (33) ಬಂಧಿತ ಆರೋಪಿ.

ಈತನ ಮೇಲೆ 2019ರಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 323, 507, 353 ಹಾಗೂ 504 ರಡಿ ಪ್ರಕರಣ (ಅ.ಕ್ರ ನಂ: 181/2019) ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತಾದರೂ, ಆರೋಪಿಯು ದೀರ್ಘಕಾಲದಿಂದ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಈತನ ವಿರುದ್ಧ ವಾರಂಟ್ ಜಾರಿಗೊಳಿಸಿತ್ತು.

ಆರೋಪಿಯು ಮಂಜೇಶ್ವರದ ಬಾಯಾರು ಪದವು ಎಂಬಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ವಿಟ್ಲ ಠಾಣಾ ಎಎಸ್ಐ ಜಯರಾಮ ಮತ್ತು ತಂಡವು ಅಲ್ಲಿಗೆ ತೆರಳಿ ಆತನನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಎಎಸ್ಐ ಜಯರಾಮ ಅವರಿಗೆ ಠಾಣಾ ಸಿಬ್ಬಂದಿ ಶ್ರೀಕುಮಾರ್, ಗೋಪಾಲಕೃಷ್ಣ, ಮಾಯಪ್ಪ ಮತ್ತು ವೆಂಕಪ್ಪ ಸಾಥ್ ನೀಡಿದ್ದಾರೆ.

ಬಂಧಿತ ಆರೋಪಿಯನ್ನು ಪೊಲೀಸರು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
