ಮಂಜೇಶ್ವರ  ಚುನಾವಣಾ ಕಣದಲ್ಲಿ ತುಳುನಾಡಿನ ಅಸ್ಮಿತೆ: ಧರ್ಮದ ದಾಳ ಬಿಟ್ಟು ‘ಜೈ ತುಳು’ ಅಸ್ತ್ರ ಪ್ರಯೋಗಿಸಿದ ಬಿಜೆಪಿ!

ಕಾಸರಗೋಡು: ಸಪ್ತಭಾಷಾ ಸಂಗಮ ಭೂಮಿ ಮಂಜೇಶ್ವರದಲ್ಲಿ ಈ ಬಾರಿಯ ಚುನಾವಣಾ ಕಣ ಕೇವಲ ಧರ್ಮ ಅಥವಾ ಅಭಿವೃದ್ಧಿಗೆ ಸೀಮಿತವಾಗಿಲ್ಲ. ಬದಲಾಗಿ, ದಶಕಗಳಿಂದಲೂ ಕಡೆಗಣಿಸಲ್ಪಟ್ಟಿರುವ ʻಭಾಷಾ ಅಸ್ಮಿತೆ’ ಈಗ ರಾಜಕೀಯದ ಕೇಂದ್ರಬಿಂದುವಾಗಿದೆ. ಬಿಜೆಪಿಯ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಸುರೇಂದ್ರನ್ ಈ ಬಾರಿ ತನ್ನ ಸಾಂಪ್ರದಾಯಿಕ ಕೇಸರಿ ಶಾಲಿನ ಜೊತೆಗೆ ʻಜೈ ತುಳು’ ಲಾಂಛನದ ಕೆಂಪು ಶಾಲನ್ನು ಧರಿಸಿ ಕಣಕ್ಕಿಳಿದಿರುವುದು ಕ್ಷೇತ್ರದ ರಾಜಕೀಯ ಲೆಕ್ಕಾಚಾರಗಳನ್ನು ಬದಲಿಸಿದೆ.

K Surendran ̧  AKM Ashraf and KR Jayananda
K Surendran ̧ AKM Ashraf and KR Jayananda

ಭಾಷಾ ಅಸ್ಮಿತೆಯ ಹಿಂದೆ ಅಡಗಿರುವ ತಂತ್ರ
ಮಲಯಾಳಂ ಭಾಷಾ ವಿಧೇಯಕದ ಜಾರಿಯಿಂದಾಗಿ ಮಂಜೇಶ್ವರದ ಕನ್ನಡ ಮತ್ತು ತುಳು ಭಾಷಿಕರಲ್ಲಿ ದಟ್ಟವಾದ ಅಸಮಾಧಾನವಿದೆ. ಸರ್ಕಾರಿ ಕೆಲಸಗಳು ಮತ್ತು ಆಡಳಿತದಲ್ಲಿ ಮಲಯಾಳಂ ಕಡ್ಡಾಯಗೊಳಿಸುತ್ತಿರುವುದು ಈ ಭಾಗದ ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುತ್ತಿದೆ ಎಂಬ ಭಾವನೆ ಬಲವಾಗಿದೆ. ಇದನ್ನು ಅರಿತಿರುವ ಕೆ. ಸುರೇಂದ್ರನ್, ಧರ್ಮದ ಆಧಾರದ ಮೇಲೆ ಮತ ಕೇಳುವ ಬದಲು ʻತುಳುನಾಡು’ ಮತ್ತು ʻಭಾಷಾ ಹಕ್ಕು’ಗಳ ಹೆಸರಿನಲ್ಲಿ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಭಾಷೆಯ ವಿಚಾರವು ಧರ್ಮವನ್ನು ಮೀರಿ ಜನರನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ ಎಂಬುದು ಬಿಜೆಪಿಯ ಲೆಕ್ಕಾಚಾರ.

ಸೂರ್ಯ-ಚಂದ್ರನ ಲಾಂಛನ ಮತ್ತು ತುಳುವರ ಭಾವನೆ
ನಾಮಪತ್ರ ಸಲ್ಲಿಕೆ ವೇಳೆ ಸುರೇಂದ್ರನ್ ಧರಿಸಿದ್ದ ಶಾಲಿನಲ್ಲಿ ಸೂರ್ಯ ಮತ್ತು ಅರ್ಧಚಂದ್ರಾಕೃತಿಯ ಲಾಂಛನವಿತ್ತು. ಇದು ತುಳುನಾಡಿನ ಸಾಂಸ್ಕೃತಿಕ ಸಂಕೇತವೆಂದು ಬಿಂಬಿಸಲಾಗುತ್ತಿದೆ. ಗಡಿ ಭಾಗದ ಕನ್ನಡಿಗರು ಮತ್ತು ತುಳುವರು ಕೇರಳ ಸರ್ಕಾರದ ‘ಭಾಷಾ ಹೇರಿಕೆ’ಯಿಂದ ರೋಸಿ ಹೋಗಿದ್ದು, ಅದನ್ನು ವಿರೋಧಿಸುವ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸುರೇಂದ್ರನ್ ಅವರ ಈ ಹೊಸ ಅವತಾರವು ಸಾಂಪ್ರದಾಯಿಕ ಬಿಜೆಪಿ ಮತದಾರರ ಜೊತೆಗೆ, ಯುಡಿಎಫ್ ಮತ್ತು ಎಲ್‌ಡಿಎಫ್ ಕಡೆಗಿದ್ದ ಭಾಷಾ ಪ್ರೇಮಿಗಳ ಮತಗಳನ್ನು ಸೆಳೆಯುವ ಸಾಧ್ಯತೆಯಿದೆ.

ಅಶ್ರಫ್ ಅವರ ʻಬಹುಭಾಷಾ’ ಪ್ರತಿರೋಧ
ಬಿಜೆಪಿಯ ಈ ಭಾಷಾ ತಂತ್ರಕ್ಕೆ ಪ್ರತಿಯಾಗಿ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್ ಕೂಡ ಹಿಂದೆ ಬಿದ್ದಿಲ್ಲ. ಸ್ವತಃ ಬಹುಭಾಷಾ ತಜ್ಞರಾಗಿರುವ ಅಶ್ರಫ್, ತುಳು, ಕನ್ನಡ ಮತ್ತು ಮಲಯಾಳಂನಲ್ಲಿ ನಿರರ್ಗಳವಾಗಿ ಮಾತನಾಡುವ ಮೂಲಕ ಜನರ ಮನಗೆದ್ದಿದ್ದಾರೆ. “ಸುರೇಂದ್ರನ್ ಅವರಿಗೆ ಚುನಾವಣೆ ಬಂದಾಗ ಮಾತ್ರ ತುಳು ನೆನಪಾಗುತ್ತದೆ, ಆದರೆ ನಾವು ನಿತ್ಯವೂ ತುಳುನಾಡಿನ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದೇವೆ” ಎಂಬುದು ಅಶ್ರಫ್ ಅವರ ಪ್ರತ್ಯುತ್ತರ. ಶಿರೂರು ಭೂಕುಸಿತದ ಸಮಯದಲ್ಲಿ ಅವರು ನಡೆಸಿದ ಹೋರಾಟವು ಭಾಷೆ ಮೀರಿದ ಮಾನವೀಯ ನೆಲೆಯಲ್ಲಿ ಅವರಿಗೆ ದೊಡ್ಡ ಬೆಂಬಲ ತಂದುಕೊಟ್ಟಿದೆ.

ಫಲಿತಾಂಶದ ಮೇಲೆ ಭಾಷೆಯ ಪ್ರಭಾವ
ಕ್ಷೇತ್ರದಲ್ಲಿ ಸುಮಾರು 90,000 ಹಿಂದೂ ಮತದಾರರಿದ್ದು, ಅವರಲ್ಲಿ ಬಹುತೇಕರು ತುಳು ಮತ್ತು ಕನ್ನಡ ಭಾಷಿಕರು. ಈ ಮತಗಳನ್ನು ಸಂಪೂರ್ಣವಾಗಿ ಕ್ರೋಡೀಕರಿಸುವುದು ಸುರೇಂದ್ರನ್ ಅವರ ಗೆಲುವಿಗೆ ಅನಿವಾರ್ಯ. ಕಳೆದ ಬಾರಿ ಕೇವಲ 745 ಮತಗಳಿಂದ ಸೋತಿದ್ದ ಅವರಿಗೆ ಈ ‘ಜೈ ತುಳು’ ಘೋಷಣೆ ಆನೆಯ ಬಲ ನೀಡುತ್ತದೆಯೇ ಅಥವಾ ಮತದಾರರು ಇದನ್ನು ಕೇವಲ ‘ಚುನಾವಣಾ ಗಿಮಿಕ್’ ಎಂದು ಪರಿಗಣಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

error: Content is protected !!