ಮಾ. 26: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ವತಿಯಿಂದ 13 ಮಹಿಳಾ ರತ್ನಗಳಿಗೆ ಸನ್ಮಾನ

ಮಂಗಳೂರು: ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಇದೇ ಮಾರ್ಚ್ 26ರಂದು ನಗರದ ಬಿಜೈನಲ್ಲಿ ʻವಿಶೇಷ ಮಹಿಳಾ ದಿನಾಚರಣೆ’ ಮತ್ತು ಸಾಧಕಿಯರ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ, ಹಿರಿಯ ಪತ್ರಕರ್ತ ಭಾಸ್ಕರ್ ರೈ ಕಟ್ಟ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಸಬಲೀಕರಣ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ಸಾಧಕಿಯರನ್ನು ಗುರುತಿಸಿ ಗೌರವಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಅಂದು ಬೆಳಿಗ್ಗೆ 10.00 ಗಂಟೆಗೆ ಬಿಜೈನಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಭಾಂಗಣದಲ್ಲಿ (ಮೆಸ್ಕಾಂ ಕಚೇರಿ ಬಳಿ) ಆಯ್ಕೆ ಮಾಡಿದ ಮಹಿಳಾ ಉದ್ಯಮಿಗಳು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಉದ್ಘಾಟಿಸಲಾಗುವುದು. ದ.ಕ. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮಿ ರಾಯ್‌ಕೋಡ್ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಎ. ಹಾಗೂ ದ.ಕ. ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶಕುಂತಲ ಉಪಸ್ಥಿತರಿರಲಿದ್ದಾರೆ.

13 ಸಾಧಕಿಯರಿಗೆ ವಿಶೇಷ ಸನ್ಮಾನ
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ ಸದಸ್ಯೆ ರೋ. ಗೀತಾ ಬಿ. ರೈ ಮಾತನಾಡಿ, ಪೂರ್ವಹ್ನ 11:00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ 13 ಮಂದಿ ಸಾಧಕಿಯರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ರೋ. ಗೀತಾ ಬಿ. ರೈ ತಿಳಿಸಿದರು. ಆರೋಗ್ಯ ಕ್ಷೇತ್ರದಲ್ಲಿ ಜ್ಯೋತಿ ಕೆ. ಉಳ್ಳಾಡಿ, ಯೋಗದಲ್ಲಿ ದೇವಿಕಾ ಪುರುಷೋತ್ತಮ್, ಶಿಕ್ಷಣದಲ್ಲಿ ಪೂರ್ಣಿಮಾ ರೈ ಮತ್ತು ಪ್ರಮೀಳಾ ರಾವ್, ಮಾಧ್ಯಮ ಕ್ಷೇತ್ರದಲ್ಲಿ ಸತ್ಯವತಿ ಹಾಗೂ ಮಹಿಳಾ ಸಂಘಟನೆಯಲ್ಲಿ ಜಯಶ್ರೀ ರಟ್ಟಿಹಳ್ಳಿ ಅವರು ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ.

ಅಲ್ಲದೆ, ಸಂಗೀತ ಕ್ಷೇತ್ರದಲ್ಲಿ ವಿಭಾ ಎಸ್. ನಾಯಕ್, ಔಷಧೀಯ ಸಸ್ಯ ಸಂರಕ್ಷಣೆಯಲ್ಲಿ ಡಾ|| ರಶ್ಮಿ ಕೆ., ಮಹಿಳಾ ಮತ್ತು ಮಕ್ಕಳ ಸೇವೆಯಲ್ಲಿ ಸುಜಾತ, ಪರಿಸರ ಸೇವೆಯಲ್ಲಿ ಶ್ರದ್ಧಾ ಕೇಶವ ರಾಮಕುಂಜ, ವಿಶೇಷ ಚೇತನ ಪ್ರತಿಭೆ ಮೊಟ್ಟಮ್ಮ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಈಜುಪಟು ಶ್ರೀಲಕ್ಷ್ಮಿ ಗಣೇಶ್ ಅವರಿಗೆ ಗೌರವ ಸಲ್ಲಿಕೆಯಾಗಲಿದೆ. ಸನ್ಮಾನ ಕಾರ್ಯಕ್ರಮವನ್ನು ಮಂಗಳೂರಿನ ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ ನೆರವೇರಿಸಲಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸರ್ಕಾರದ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ವಹಿಸಲಿದ್ದಾರೆ. ಅತಿಥಿಗಳಾಗಿ ರೋಟರಿ ಜಿಲ್ಲೆ 3181ರ ಅಸಿಸ್ಟೆಂಟ್ ಗವರ್ನರ್‌ಗಳಾದ ಚನ್ನಗಿರಿ ಗೌಡ, ರಜನಿ ಭಟ್, ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕಿ ಚಂದ್ರಿಕಾ ಎಸ್. ನಾಯಕ್, ಜಿಲ್ಲಾ ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಹಾಗೂ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮೊಬೆನ್ ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಯೋಜಕರಾದ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ರೋ. ಪ್ರಮೀಳಾ ಹೆಗ್ಡೆ, ಅಸಿಸ್ಟೆಂಟ್ ಪ್ರೊಫೆಸರ್ ದೀಕ್ಷಿತಾ ಟಿ.ಎಸ್., ಮಾಜಿ ಅಧ್ಯಕ್ಷ ರೋ. ಸಂತೋಷ್ ಶೇಟ್ ಮತ್ತು ಚೇರ್ಮನ್ ಯೂತ್ ಸರ್ವಿಸ್ ರೋ. ಜಾಕ್ಸನ್ ಸಲ್ಡಾನ ಉಪಸ್ಥಿತರಿದ್ದರು.

error: Content is protected !!