ಇಸ್ಲಾಮಾಬಾದ್ ಅಂಗಳದಲ್ಲಿ ಅಮೆರಿಕ-ಇರಾನ್ ಸಿಕ್ರೇಟ್ ಮೀಟಿಂಗ್?: ವೈಟ್ ಹೌಸ್ ಬಿಟ್ಟಿಲ್ಲ ಗುಟ್ಟು!

ವಾಷಿಂಗ್ಟನ್/ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡಗಳ ನಡುವೆ ಈಗ ಶಾಂತಿಯ ಮಂತ್ರವೊಂದು ಕೇಳಿಬರುತ್ತಿದೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ವಿಶೇಷ ದೂತ ಸ್ಟೀವ್ ವಿಟ್ಕಾಫ್ ಮತ್ತು ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಅವರು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಇರಾನ್ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ.

ಆದರೆ, ಈ ಬಗ್ಗೆ ಕೇಳಿದಾಗ ವೈಟ್ ಹೌಸ್ ಪ್ರೆಸ್ ಸೆಕ್ರೆಟರಿ ಕರೋಲಿನ್ ಲೀವಿಟ್ ಮಾತ್ರ ಬಹಳ ನಾಜೂಕಾಗಿ ಜಾರಿಕೊಂಡಿದ್ದಾರೆ. “ಪರಿಸ್ಥಿತಿ ಬಹಳ ಸೂಕ್ಷ್ಮವಾಗಿದೆ, ಯಾವುದನ್ನೂ ಅಧಿಕೃತವಾಗಿ ಪ್ರಕಟಿಸುವವರೆಗೆ ನಂಬಬೇಡಿ” ಎನ್ನುವ ಮೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ!

ಇಲ್ಲಿ ಅಸಲಿ ಆಟಗಾರ ಪಾಕಿಸ್ತಾನ. ಇತ್ತ ಟ್ರಂಪ್ ಜೊತೆ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮಾತಾಡುತ್ತಿದ್ದಾರೆ, ಅತ್ತ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಜೊತೆ ಪ್ರಧಾನಿ ಶೆಹಬಾಜ್ ಶರೀಫ್ ಸಂಪರ್ಕದಲ್ಲಿದ್ದಾರೆ. ಅಮೆರಿಕ ಮತ್ತು ಇರಾನ್ ಎರಡರ ಜೊತೆಗೂ ನಂಟಿಟ್ಟುಕೊಂಡಿರುವ ಪಾಕಿಸ್ತಾನ, ತಾನು ಈ ಬಿಕ್ಕಟ್ಟನ್ನು ಬಗೆಹರಿಸುವ ಹೀರೋ ಆಗಲು ಹೊರಟಿದೆ.

ಆದರೆ ರಾಯಿಟರ್ಸ್ ಮತ್ತು ಫೈನಾನ್ಷಿಯಲ್ ಟೈಮ್ಸ್ ವರದಿಗಳ ಪ್ರಕಾರ, ಈ ಮಾತುಕತೆಗಳು ಇನ್ನೂ ಪ್ರಾಥಮಿಕ ಹಂತದಲ್ಲಿವೆ. ಇರಾನ್ ಮಾತ್ರ “ನಾವು ನೇರವಾಗಿ ಅಮೆರಿಕದ ಜೊತೆ ಮಾತಾಡಿಲ್ಲ, ಕೇವಲ ಸ್ನೇಹ ರಾಷ್ಟ್ರಗಳ ಮೂಲಕ ಬಂದ ಸಂದೇಶಗಳಿಗೆ ಉತ್ತರಿಸಿದ್ದೇವೆ ಅಷ್ಟೇ” ಎಂದು ಹಠ ಹಿಡಿದು ಕುಳಿತಿದೆ.

ಮಾರುಕಟ್ಟೆಯಲ್ಲಿ ಕುಸಿತ, ಟ್ರಂಪ್ ಕೈಯಲ್ಲಿ ಡೀಲ್!
ಟ್ರಂಪ್ ಅವರ ಈ ಐದು ದಿನಗಳ ವಿರಾಮದ ಘೋಷಣೆ ತೈಲ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ತಂದಿದೆ. ಕಳೆದ ವಾರ ಬ್ಯಾರೆಲ್‌ಗೆ 120 ಡಾಲರ್ ಹತ್ತಿರ ಹೋಗಿದ್ದ ಬ್ರೆಂಟ್ ಕಚ್ಚಾ ತೈಲದ ಬೆಲೆ ಈಗ 100 ಡಾಲರ್‌ಗಿಂತ ಕೆಳಕ್ಕೆ ಇಳಿದಿದೆ. ಟ್ರಂಪ್ ಅವರ ಸಂಪುಟದ ಸದಸ್ಯರು “ಟ್ರಂಪ್ ಒಬ್ಬ ಅದ್ಭುತ ಡೀಲ್ ಮೇಕರ್, ಅವರು ಅಮೆರಿಕಕ್ಕೆ ಗೆಲುವು ತಂದುಕೊಡುವ ಒಪ್ಪಂದ ಮಾಡಿಯೇ ತೀರುತ್ತಾರೆ” ಎಂದು ಬೆನ್ನು ಚಪ್ಪರಿಸಿಕೊಳ್ಳುತ್ತಿದ್ದಾರೆ. ಆದರೆ, ಒಂದು ವೇಳೆ ಮಾತುಕತೆ ಫೇಲ್ ಆದರೆ “ನಮ್ಮ ಪುಟ್ಟ ಹೃದಯಗಳು ತಣ್ಣಗಾಗುವವರೆಗೆ ಬಾಂಬ್ ಹಾಕುತ್ತಲೇ ಇರುತ್ತೇವೆ” ಎಂಬ ಟ್ರಂಪ್ ಸ್ಟೈಲ್ ಬೆದರಿಕೆ ಕೂಡ ಹಾಗೆಯೇ ಇದೆ!

ಪಾಕಿಸ್ತಾನದ ಮಧ್ಯಸ್ಥಿಕೆ ನಂಬಬಹುದೇ?
ಪಾಕಿಸ್ತಾನ ಈ ಸಂಧಾನಕ್ಕೆ ಮುಂದಾಗಿರುವುದು ಕೇವಲ ಶಾಂತಿಗಾಗಿ ಅಲ್ಲ, ಬದಲಾಗಿ ತನ್ನ ಹಳ್ಳ ಹಿಡಿದಿರುವ ಆರ್ಥಿಕತೆಯನ್ನು ಉಳಿಸಿಕೊಳ್ಳಲು. ಸೌದಿ ಅರೇಬಿಯಾದ ಜೊತೆ ರಕ್ಷಣಾ ಒಪ್ಪಂದ ಮಾಡಿಕೊಂಡಿರುವ ಪಾಕಿಸ್ತಾನಕ್ಕೆ ಇರಾನ್ ಜೊತೆಗಿನ ವೈರತ್ವ ಬೇಕಿಲ್ಲ. ಆದರೆ, ಕೆಲವು ಅಂತಾರಾಷ್ಟ್ರೀಯ ವಿಶ್ಲೇಷಕರು ಪಾಕಿಸ್ತಾನದ ಈ ಮಧ್ಯಸ್ಥಿಕೆಯನ್ನು “ಅಷ್ಟೇನೂ ನಂಬಲರ್ಹವಲ್ಲದ ಪ್ರಯತ್ನ” ಎಂದು ಕರೆದಿದ್ದಾರೆ. ಜಗತ್ತಿನ ಎರಡು ದೊಡ್ಡ ವೈರಿಗಳನ್ನು ಇಸ್ಲಾಮಾಬಾದ್ ಒಂದೇ ಟೇಬಲ್‌ಗೆ ಕರೆತರುತ್ತದೋ ಅಥವಾ ಇದು ಕೇವಲ ಬ್ಯಾಕ್‌ಚಾನೆಲ್ ಹರಟೆಯಾಗಿ ಉಳಿಯುತ್ತದೋ ಕಾದು ನೋಡಬೇಕು.

error: Content is protected !!