
ತುಮಕೂರು: 40 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ ಕುಮಾರ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್‌ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ.

ಒಂದು ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ಕಾರನ್ನು ವಾಪಸ್ ನೀಡುವ ನೆಪದಲ್ಲಿ ಪಿಎಸ್‌ಐ ಚೇತನ ಕುಮಾರ್ 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಮೊದಲ ಹಂತವಾಗಿ 40 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಕ್ಷಣದಲ್ಲೇ ದಾಳಿ ನಡೆಸಿದ ಲೋಕಾಯುಕ್ತ ತಂಡ, ಪಿಎಸ್‌ಐ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದೆ.

ಲೋಕಾಯುಕ್ತ ಪೊಲೀಸರು ತುಮಕೂರು ಗ್ರಾಮಾಂತರ ಪಿಎಸ್‌ಐ ಚೇತನ ಕುಮಾರ್ ವಿರುದ್ಧ ಕಾನೂನು ಕ್ರಮ ಮುಂದುವರಿಸಿದ್ದು, ತನಿಖೆ ಬಳಿಕ ಹೆಚ್ಚಿನ ಮಾಹಿತಿ ದೊರೆಯಲಿದೆ.