
ಜೋಧ್ ಪುರ: ರಾಜಸ್ಥಾನದ ಜೋಧ್‌ಪುರದ ಬೋರನಾಡ ಆಶ್ರಮದ ಖ್ಯಾತ ಧಾರ್ಮಿಕ ಪ್ರಚಾರಕಿ ಸಾಧ್ವಿ ಪ್ರೇಮ್ ಬೈಸಾ, ಆಕೆಗೆ ವಯಸ್ಸಿನ್ನೂ ಕೇವಲ 25 ವರ್ಷ. ತನ್ನ ಆಧ್ಯಾತ್ಮಿಕ ಮಾತು, ನಡೆ ನುಡಿಯಿಂದ ಲಕ್ಷಾಂತರ ಅನುಯಾಯಿಗಳನ್ನ ಸಂಪಾದಿಸಿದ್ದರು. ಆದರೆ ಆಶ್ರಮದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.ಆಶ್ರಮದಲ್ಲಿ ಕುಸಿದು ಬಿದ್ದಿದ್ದ ಸಾಧ್ವಿ ಅವರನ್ನು, ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ತನ್ನ ಗುರು ಹಾಗೂ ತಂದೆಗೆ ಸಮಾನವಾದ ಸ್ವಾಮೀಜಿಯನ್ನು ತಬ್ಬಿಕೊಂಡು ರಾಸಲೀಲೆಯಲ್ಲಿ ತೊಡಗಿದ್ದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಹೊರಬಂದ ಬಳಿಕ ಸಾಧ್ವಿಗೆ ಪ್ರತಿದಿನ ಚಿತ್ರಹಿಂಸೆ ನೀಡಲಾಗುತ್ತಿತ್ತು ಎನ್ನಲಾಗಿದೆ. ಈ ಸಂಬಂಧ ಪ್ರಕರಣವನ್ನೂ ದಾಖಲಿಸಲಾಗಿತ್ತು. ನಂತರ ಸಾಧ್ವಿ ತನ್ನ ಮುಗ್ಧತೆಯನ್ನು ಸಾಬೀತುಪಡಿಸಲು ಯಾವುದೇ ಕಠಿಣ ಪರೀಕ್ಷೆಗೆ ಒಳಗಾಗಲು ಸಿದ್ಧನಿದ್ದೇನೆ ಎಂದು ಸಾರ್ವಜನಿಕವಾಗಿ ಹೇಳಿದ್ದರು.

ಪ್ರಾಥಮಿಕ ತನಿಖೆಯ ಪ್ರಕಾರ, ಸಾಧ್ವಿ ಜ್ವರದಿಂದ ಬಳಲುತ್ತಿದ್ದರು ಮತ್ತು ಆಶ್ರಮದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆಶ್ರಮಕ್ಕೆ ಕರೆಸಲಾಗಿದ್ದ ಕಾಂಪೌಂಡರ್ ನೀಡಿದ ಇಂಜೆಕ್ಷನ್ ನಂತರ ಆಕೆ ಕುಸಿದು ಬಿದ್ದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆಶ್ರಮದಲ್ಲೇ ಆಕೆಗೆ ಔಷಧೋಪಚಾರ ನೀಡಲಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸುದ್ದಿ ಆಶ್ರಮದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗೆ ಕಾರಣವಾಗಿದೆ. ಸಾವಿರಾರು ಭಕ್ತರು ಜಮಾಯಿಸಿ, ನ್ಯಾಯಯುತ ಮತ್ತು ಪಾರದರ್ಶಕ ತನಿಖೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
“ನಾನು ಪ್ರತಿ ಕ್ಷಣವನ್ನು ಸನಾತನದ ಪ್ರಚಾರಕ್ಕಾಗಿ ಜೀವಿಸಿದ್ದೇನೆ. ಈ ಜಗತ್ತಿನಲ್ಲಿ ಸನಾತನ ಧರ್ಮಕ್ಕಿಂತ ದೊಡ್ಡ ಧರ್ಮವಿಲ್ಲ. ಇಂದು ನನ್ನ ಕೊನೆಯ ಉಸಿರು ಇರುವವರೆಗೂ ನನ್ನ ಹೃದಯದಲ್ಲಿ ಇದೆ. ನಾನು ಸನಾತನ ಧರ್ಮದಲ್ಲಿ ಜನಿಸಿದ್ದು ಪುಣ್ಯ ಮತ್ತು ಸನಾತನಕ್ಕಾಗಿ ಕೊನೆಯ ಉಸಿರು ಬಿಟ್ಟಿದ್ದೇನೆ. ಆದಿ ಜಗದ್ಗುರು ಶಂಕರಾಚಾರ್ಯ, ವಿಶ್ವ ಯೋಗ ಗುರುಗಳು ಮತ್ತು ಪೂಜ್ಯ ಸಂತ ಮಹಾತ್ಮರ ಆಶೀರ್ವಾದದ ಪ್ರತಿ ಕ್ಷಣವೂ ನನ್ನ ಜೀವನದಲ್ಲಿದೆ. ನಾನು ಆದಿ ಗುರು ಶಂಕರಾಚಾರ್ಯ ಮತ್ತು ದೇಶದ ಅನೇಕ ಮಹಾನ್ ಸಂತರಿಗೆ ಪತ್ರ ಬರೆದು ಅಗ್ನಿ ಪರೀಕ್ಷೆಗೆ ಕೋರಿದ್ದೆ ಆದರೆ ಏನು ಸಿಕ್ಕಿತು? ನಾನು ಈ ಲೋಕಕ್ಕೆ ಶಾಶ್ವತ ವಿದಾಯ ಹೇಳುತ್ತಿದ್ದೇನೆ. ಆದರೆ, ನನಗೆ ದೇವರಲ್ಲಿ ಮತ್ತು ಗೌರವಾನ್ವಿತ ಸಂತ ಮಹಾತ್ಮರಲ್ಲಿ ಪೂರ್ಣ ನಂಬಿಕೆಯಿದೆ. ನಾನು ಬದುಕಿದ್ದರೂ ಅಥವಾ ನಾನು ಹೋದ ಮೇಲಾದರೂ ನ್ಯಾಯ ಸಿಗುತ್ತದೆ ” ಎಂದು ಬರೆದಿರುವ ಪೋಸ್ಟ್ ಒಂದು ಸಾಧ್ವಿ ಸಾವಿನ ಬೆನ್ನಲ್ಲೇ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ.