ಬಂಟ್ವಾಳ: ಫೇಸ್‌ಬುಕ್‌ನಲ್ಲಿ ಪ್ರಕಟವಾದ ಜಾಹೀರಾತನ್ನು ನಂಬಿ ಆನ್‌ಲೈನ್ ಆ್ಯಪ್ ಮೂಲಕ ಚೂಡಿದಾರ್ ಬುಕ್ ಮಾಡಿದ ಮಹಿಳೆಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು 87,524 ರೂ. ಕಳೆದುಕೊಂಡ ಘಟನೆ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸ್ ದೂರಿನ ಪ್ರಕಾರ, 35 ವರ್ಷದ ಮಹಿಳೆ ದಿನಾಂಕ ಜ.03ರಂದು ಫೇಸ್‌ಬುಕ್‌ನಲ್ಲಿ ಕಂಡ ಜಾಹೀರಾತಿನ ಆಧಾರದಲ್ಲಿ Aramya App ಮೂಲಕ ಸಾಲ್ವಾರ್–ಚೂಡಿದಾರ್ ಬಟ್ಟೆಯನ್ನು ಬುಕ್ ಮಾಡಿ ಪಾವತಿ ಮಾಡಿದ್ದರು. ಬಳಿಕ 05-01-2026 ಮತ್ತು 06-01-2026 ರಂದು ವಿವಿಧ ಮೊಬೈಲ್ ಸಂಖ್ಯೆಗಳ ಮೂಲಕ ಕರೆ ಹಾಗೂ ವಾಟ್ಸ್‌ಆಪ್ ಸಂದೇಶ ಕಳುಹಿಸಿದ ಆರೋಪಿಗಳು, ಪಾವತಿ ‘ಸ್ಟಕ್’ ಆಗಿದೆ ಎಂದು ಹೇಳಿ ಸ್ಕ್ಯಾನರ್, ರಿಫಂಡ್ ಕೋಡ್ ಹಾಗೂ ಬ್ಯಾಂಕ್ ಖಾತೆಗಳ ಮೂಲಕ ಮತ್ತೆ ಮತ್ತೆ ಹಣ ಪಾವತಿಸಲು ಒತ್ತಾಯಿಸಿದ್ದಾರೆ.
ಈ ರೀತಿ ವಂಚಕರ ಮಾತು ನಂಬಿದ ಯುವತಿ ಒಟ್ಟು ರೂ. 87,524/- ಹಣವನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.ಸಂ. 06/2026 ಕಲಂ 318(4), 318(2), 319(2) BNS 2023 ಹಾಗೂ ಐಟಿ ಕಾಯ್ದೆ 66(ಸಿ), 66(ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
