ಕಾಕಿನಾಡ: ಇಂದು ಮಧ್ಯಾಹ್ನ ಸುಮಾರು 1.30ರ ಸಮಯ. ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ದೈನಂದಿನ ಕೆಲಸದಲ್ಲಿ ಮಗ್ನರಾಗಿದ್ದರು. ಅಷ್ಟರಲ್ಲೇ ಶಾಂತವಾಗಿದ್ದ ಪರಿಸರವನ್ನು ಸೀಳಿಕೊಂಡು ಕೇಳಿಬಂದಿತು ಆ ಭೀಕರ ಶಬ್ದ… ‘ಢಂ… ಢಂ… ಢಂ…!’

ಒಂದರ ಹಿಂದೆ ಒಂದರಂತೆ ಸಂಭವಿಸಿದ ಸರಣಿ ಸ್ಫೋಟದ ಆರ್ಭಟಕ್ಕೆ ಭೂಮಿ ಕಂಪಿಸಿದಂತಾಯಿತು. ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಸಾಮರ್ಲಕೋಟ ಮಂಡಲದ ಪಟಾಕಿ ತಯಾರಿಕಾ ಘಟಕವೊಂದು ಕ್ಷಣಾರ್ಧದಲ್ಲಿ ಅಗ್ನಿ ಕುಂಡವಾಗಿ ಮಾರ್ಪಟ್ಟಿತ್ತು. ಈ ಮಹಾ ದುರಂತದಲ್ಲಿ ಅಕ್ಷರಶಃ 18 ಮಂದಿ ಸಜೀವ ದಹನವಾಗಿದ್ದಾರೆ ಹಾಗೂ ಹಲವರು ಸಾವಿನ ದವಡೆಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಕಾರ್ಖಾನೆಯೊಳಗೆ ಕೆಲಸ ಮಾಡುತ್ತಿದ್ದ ಬಡ ಕಾರ್ಮಿಕರ ಮೃತದೇಹಗಳು ಅಕ್ಷರಶಃ ಗಾಳಿಯಲ್ಲಿ ಚೆಂಡಿನಂತೆ ಹಾರಿ ನೂರಾರು ಅಡಿ ದೂರದ ಹೊಲಗದ್ದೆಗಳಿಗೆ ಬಿದ್ದಿವೆ. ಆ ದೃಶ್ಯಗಳು ಎದೆ ನಡುಗಿಸುವಂತಿದ್ದವು; ಎಲ್ಲಿ ನೋಡಿದರೂ ಗುರುತು ಹಿಡಿಯಲಾಗದ ಸ್ಥಿತಿಯಲ್ಲಿ ಬಿದ್ದಿರುವ ಮೃತದೇಹಗಳು, ರಕ್ತಸಿಕ್ತವಾಗಿ ಬಿದ್ದಿರುವ ಬಟ್ಟೆಗಳು… ಬದುಕು ಕಟ್ಟಿಕೊಳ್ಳಲು ಬಂದವರ ಬದುಕು ಹೀಗೆ ಬೂದಿಯಾಗುತ್ತದೆಯೆಂದು ಯಾರೂ ಊಹಿಸಿರಲಿಲ್ಲ.

ಗಾಯಾಳುಗಳ ಆಕ್ರಂದನ, ಢಂ ಢಂ ಎನ್ನುತ್ತಿರುವ ಮೃತ್ಯು!
ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ದೇಹದ ಶೇ. 80ರಷ್ಟು ಭಾಗ ಸುಟ್ಟು ಕರಕಲಾಗಿದೆ. ರಕ್ಷಣಾ ಸಿಬ್ಬಂದಿ ಒಳಗೆ ನುಗ್ಗಲು ಪ್ರಯತ್ನಿಸುತ್ತಿದ್ದರೂ, ಘಟಕದೊಳಗಿಂದ ಇನ್ನೂ ಕೇಳಿಬರುತ್ತಿರುವ ಸಣ್ಣ ಪ್ರಮಾಣದ ʻಢಂ… ಢಂ…’ ಶಬ್ದಗಳು ಮೃತ್ಯುವಿನ ಅಟ್ಟಹಾಸದಂತೆ ಭಾಸವಾಗುತ್ತಿವೆ. ಪ್ರತಿ ಸ್ಫೋಟವೂ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದು, ಅವಶೇಷಗಳ ಅಡಿ ಇನ್ನೂ ಕೆಲವರು ಸಿಲುಕಿರುವ ಭೀತಿ ದಟ್ಟವಾಗಿದೆ.
ಕಟ್ಟೆಚ್ಚರ ಮೀರಿತ್ತೇ ಕಾಮಗಾರಿ?
ಸೀಮಿತ ಪ್ರಮಾಣಕ್ಕಿಂತ ಹೆಚ್ಚಿನ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದೇ ಈ ದುರಂತಕ್ಕೆ ಮೂಲ ಕಾರಣ ಎಂದು ಶಂಕಿಸಲಾಗಿದೆ. ನಿಯಮಗಳನ್ನು ಗಾಳಿಗೆ ತೂರಿ ನಡೆಸುತ್ತಿದ್ದ ಈ ಅಕ್ರಮ ಪಟಾಕಿ ತಯಾರಿಕಾ ಘಟಕವು ಇಂದು 18 ಕುಟುಂಬಗಳನ್ನು ಬೀದಿಗೆ ತಂದಿದೆ. ಇಡೀ ಜಿಲ್ಲೆಯಾದ್ಯಂತ ಶೋಕದ ಛಾಯೆ ಮೂಡಿದ್ದು, ಮೃತರ ಕುಟುಂಬದವರ ಕರುಳು ಸೀಳುವ ಆಕ್ರಂದನವು ಸ್ಫೋಟದ ಶಬ್ದಕ್ಕಿಂತಲೂ ಭಯಾನಕವಾಗಿ ಕೇಳಿಬರುತ್ತಿದೆ.
ಪೊಲೀಸರು ಹಾಗೂ ಅಗ್ನಿಶಾಮಕ ದಳದ ಹೋರಾಟ ಮುಂದುವರಿದಿದೆ. ಆದರೆ, ಆ ಮುಗ್ಧ ಕಾರ್ಮಿಕರ ಪಾಲಿಗೆ ಈ ಶನಿವಾರ ಕರಾಳ ಮರಣ ಶಾಸನವಾಗಿ ಪರಿಣಮಿಸಿದೆ.