ಇಸ್ರೇಲ್‌ನ ‘ರೋರಿಂಗ್ ಲಯನ್’, ಅಮೆರಿಕದ ʻಎಪಿಕ್ ಫ್ಯೂರಿ’ ಆರ್ಭಟಕ್ಕೆ ಬೆಚ್ಚಿಬಿದ್ದ ಇರಾನ್! ಕತಾರ್-ಬಹ್ರೇನ್ ಮೇಲೆ ಕ್ಷಿಪಣಿ ದಾಳಿ!

ಟೆಹ್ರಾನ್/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಮುಗಿಲು ಮುಟ್ಟಿದ್ದು, ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಹೂಡಿರುವ ವ್ಯೂಹಾತ್ಮಕ ಯುದ್ಧವು ಈಗ ನಿರ್ಣಾಯಕ ಹಂತ ತಲುಪಿದೆ. ಇಸ್ರೇಲ್‌ನ ‘ರೋರಿಂಗ್ ಲಯನ್’ (Roaring Lion) ಹಾಗೂ ಅಮೆರಿಕದ ʻಆಪರೇಷನ್ ಎಪಿಕ್ ಫ್ಯೂರಿ’ (Epic Fury) ಹೆಸರಿನಲ್ಲಿ ನಡೆದ ದಾಳಿಗಳು ಇರಾನ್‌ನ ಮಿಲಿಟರಿ ಶಕ್ತಿಯನ್ನು ನಡುಗಿಸಿವೆ.

ಏನದು ಇಸ್ರೇಲ್‌ನ ‘ರೋರಿಂಗ್ ಲಯನ್’ (Roaring Lion)?
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನೇತೃತ್ವದಲ್ಲಿ ಆರಂಭವಾಗಿರುವ ಈ ಕಾರ್ಯಾಚರಣೆಯು ಇರಾನ್‌ನ ‘ಅಸ್ತಿತ್ವದ ಭೀತಿ’ಯನ್ನು ತೊಡೆದುಹಾಕುವ ಗುರಿ ಹೊಂದಿದೆ. ಇಸ್ರೇಲಿ ವಾಯುಪಡೆಗಳು ಶನಿವಾರ ಮುಂಜಾನೆ ಇರಾನ್ ರಾಜಧಾನಿ ಟೆಹ್ರಾನ್‌ನ ಹೃದಯಭಾಗಕ್ಕೆ ನುಗ್ಗಿ, ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ನಿಖರ ಕ್ಷಿಪಣಿ ದಾಳಿ ನಡೆಸಿವೆ. “ಈ ಕೊಲೆಗಡುಕ ಭಯೋತ್ಪಾದಕ ಆಡಳಿತಕ್ಕೆ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡುವುದಿಲ್ಲ” ಎಂದು ನೆತನ್ಯಾಹು ಗುಡುಗಿದ್ದು, ಇಸ್ರೇಲ್ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿ ಬಂಕರ್‌ಗಳನ್ನು ಸನ್ನದ್ಧಗೊಳಿಸಿದ್ದಾರೆ.

ಅಮೆರಿಕದ ‘ಆಪರೇಷನ್ ಎಪಿಕ್ ಫ್ಯೂರಿ’ (Epic Fury)
ಇತ್ತ ಅಮೆರಿಕವು ಪೆಂಟಗನ್ ಮೂಲಕ ʻಎಪಿಕ್ ಫ್ಯೂರಿ’ ಕಾರ್ಯಾಚರಣೆಯನ್ನು ಚಾಲನೆಗೊಳಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಎಲ್ಲೆಡೆ ಬಾಂಬ್‌ಗಳು ಸುರಿಯಲಿವೆ” ಎಂದು ಎಚ್ಚರಿಸಿದ್ದು, ಇರಾನ್ ಮೇಲಿನ ಈ ದಾಳಿಯು ಹಲವು ದಿನಗಳ ಕಾಲ ಮುಂದುವರಿಯುವ ಸೂಚನೆ ನೀಡಿದ್ದಾರೆ. ಅಮೆರಿಕದ ಅತ್ಯಾಧುನಿಕ ಯುದ್ಧವಿಮಾನಗಳು ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳನ್ನು ಧ್ವಂಸ ಮಾಡುತ್ತಿವೆ. ಈ ಕಾರ್ಯಾಚರಣೆಯಿಂದಾಗಿ ಅಮೆರಿಕದ ಸೈನಿಕರಿಗೂ ಸಾವು-ನೋವು ಸಂಭವಿಸಬಹುದು ಎಂದು ಟ್ರಂಪ್ ಒಪ್ಪಿಕೊಂಡಿದ್ದರೂ, ಇರಾನ್‌ನ ಬೆನ್ನೆಲುಬು ಮುರಿಯುವವರೆಗೂ ಹಿಂದೆ ಸರಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಇರಾನ್‌ನ ಭೀಕರ ತಿರುಗೇಟು:
ದಾಳಿಗೆ ತತ್ತರಿಸದ ಇರಾನ್, ಗಲ್ಫ್ ರಾಷ್ಟ್ರಗಳ ಮೇಲೆ ಏಕಕಾಲದಲ್ಲಿ ಕ್ಷಿಪಣಿಗಳ ಮಳೆ ಸುರಿಸುವ ಮೂಲಕ ಭೀಕರವಾಗಿ ತಿರುಗೇಟು ನೀಡಿದೆ.
ಯುಎಇ ಮೇಲೆ ಅಟ್ಯಾಕ್: ಇರಾನ್ ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಅಬುಧಾಬಿಯ ಮೇಲೆ ಅಪ್ಪಳಿಸಿದ್ದು, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ದುಬೈನಲ್ಲಿಯೂ ಸರಣಿ ಸ್ಫೋಟಗಳು ಸಂಭವಿಸಿವೆ.
ಅಮೆರಿಕ ನೆಲೆಗಳ ಗುರಿ: ಬಹ್ರೇನ್‌ನಲ್ಲಿರುವ ಅಮೆರಿಕದ 5ನೇ ನೌಕಾಪಡೆ ಕೇಂದ್ರ ಮತ್ತು ಕತಾರ್‌ನ ಅಲ್-ಉದೈದ್ ವಾಯುನೆಲೆಯನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸಿದೆ.

ಖತಾರ್ ಮಧ್ಯಪ್ರವೇಶ: ಕತಾರ್ ತನ್ನಲ್ಲಿದ್ದ ಅಮೆರಿಕ ನಿರ್ಮಿತ ಪೇಟ್ರಿಯಾಟ್ ಕ್ಷಿಪಣಿ ತಡೆ ವ್ಯವಸ್ಥೆಯ ಮೂಲಕ ಇರಾನ್‌ನ ಕ್ಷಿಪಣಿಯನ್ನು ಹೊಡೆದುರುಳಿಸಿದೆ. ಇರಾನ್ ವಿದೇಶಾಂಗ ಇಲಾಖೆಯು “ದಾಳಿಕೋರರು ಈ ಕೃತ್ಯಕ್ಕೆ ಪಶ್ಚಾತ್ತಾಪ ಪಡುವಂತೆ ಮಾಡುತ್ತೇವೆ” ಎಂದು ಎಚ್ಚರಿಸುವ ಮೂಲಕ ಪೂರ್ಣ ಪ್ರಮಾಣದ ಯುದ್ಧದ ಮುನ್ಸೂಚನೆ ನೀಡಿದೆ.

ಈ ಮಹಾಸಂಗ್ರಾಮದಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಭಾರತ ಸೇರಿದಂತೆ ಹಲವು ದೇಶಗಳು ತಮ್ಮ ಪ್ರಜೆಗಳನ್ನು ಸುರಕ್ಷಿತವಾಗಿರಿಸಲು ತುರ್ತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿವೆ.

error: Content is protected !!