ʻಮಂಗ್ಳೂರಿನಲ್ಲಿ ಮಿನಿ ಬಾಂಗ್ಲಾʼ ವಾಟ್ಸ್ಯಾಪ್‌ನಲ್ಲಿ ಸುಳ್ಳು ಸುದ್ದಿ  ಹಂಚಿದ ವ್ಯಕ್ತಿ ವಶಕ್ಕೆ: ಕಮಿಷನರ್‌ ಖಡಕ್‌ ಎಚ್ಚರಿಕೆ

ಮಂಗಳೂರು: ಕೆಲವು ವಾಟ್ಸಾಪ್‌ ಗುಂಪುಗಳಲ್ಲಿ ಅಮಾಯಕರ ವಿರುದ್ಧ ದಾಳಿ ಉದ್ದೇಶದಿಂದ ಸಂದೇಶಗಳನ್ನು ಪೋಸ್ಟ್ ಮಾಡಲಾಗಿರುವ ಘಟನೆ ತಮ್ಮ ಗಮನಕ್ಕೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಒಬ್ಬನನ್ನು ವಶಕ್ಕೆ ಪಡೆದಿದ್ದಾಗಿ ಮಂಗಳೂರಿನ ಪೊಲೀಸ್‌ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.

“ನಗರದ ರಾವ್ ಆಂಡ್ ರಾವ್ ಸರ್ಕಲ್ ರಿಕ್ಷಾ ಸ್ಟ್ಯಾಂಡ್ ಹಿಂಬದಿ ‘ಬಂಗಾಳಿ ಕ್ಯಾಂಟೀನ್’ ಅಂತ ಬೋರ್ಡ್ ಹಾಕಿ ಅದರ ಅಕ್ಕಪಕ್ಕ ಕೆಲವು ಅನಧಿಕೃತ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಇದನ್ನು ಪೊಲೀಸ್ ಇಲಾಖೆ ನೋಡಿಯೂ ಕಣ್ಣು ಮುಚ್ಚಿ ಕುಳಿತಿದೆ. ಹಿಂದೂ ಸಂಘಟನೆಯವರಿಗೆ ತಿಳಿಯುವ ಹಾಗೆ ಇದನ್ನು ಶೇರ್ ಮಾಡಿ” ಎಂಬುದಾಗಿ ‘ಹಿಂದೂ ಗೆಳೆಯರ ಬಳಗ’ ಎಂಬ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಪ್ರಚೋದನಕಾರಿ ಬರಹವನ್ನು ಉಲ್ಲೇಖಿಸಿ ಅವರು ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಹಿಂದಿನ ದಿನಗಳಲ್ಲಿ ಭಾರತೀಯ ವಲಸೆ ಕಾರ್ಮಿಕರ ಮೇಲೆ ನಡೆದ ದಾಳಿಯ ಹಿನ್ನೆಲೆಗಳನ್ನು ಗಮನದಲ್ಲಿಟ್ಟುಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಗಳ ಬಗ್ಗೆ ಕಮಿಷನರ್‌ ಎಚ್ಚರಿಕೆ ನೀಡಿದ್ದು, ಈ ಕುಟುಂಬದ ಹೆಸರು ಮತ್ತು ವಾಸ್ತವ ಹಿನ್ನೆಲೆ ಪರಿಶೀಲನೆ ಮಾಡಿದಾಗ, ಅವರ ಹೆಸರಿನಲ್ಲಿ 2014 ರಲ್ಲಿ ಖರೀದಿಸಲಾದ ಆಸ್ತಿ ದಾಖಲೆಗಳು ಎನ್ನುವುದು ಸ್ಪಷ್ಟವಾಗಿದ್ದು, ಅವರು ಭಾರತೀಯರಲ್ಲ ಎಂಬುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತಿಳಿಸಿದ್ದಾರೆ.

ಬಾಂಗ್ಲಾದೇಶ ಮೂಲದವರ ಬಗ್ಗೆ ಸಂಶಯವಿದ್ದರೆ, ಯಾರಾದರೂ ಮಾಹಿತಿ ಹೊಂದಿದ್ದರೆ ಹತ್ತಿರದ ಪೊಲೀಸ್‌ ಠಾಣೆ, ಎಸಿಪಿ ಅಥವಾ ಸಿಪಿ ಕಚೇರಿಗೆ ನೀಡುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ. ಮಾಹಿತಿ ಪರಿಶೀಲನೆಯ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಅಗತ್ಯವಿದ್ದರೆ ಗಡೀಪಾರು ಮಾಡಲಾಗುತ್ತದೆ ಎಂದವರು ತಿಳಿಸಿದ್ದಾರೆ.

ಅನುಮತಿ ಇಲ್ಲದೆ ಅಥವಾ ತಪ್ಪಾಗಿ ಯಾರಾದರೂ ಬಾಂಗ್ಲಾದೇಶಿ ಎಂದು ಹೇಳುವ ಅಥವಾ ಕೆಲವು ಜನರ ಮೇಲೆ ದಾಳಿ ಮಾಡುವ ರೀತಿಯಲ್ಲಿ ಸಂದೇಶಗಳನ್ನು ಹರಡಿದರೆ, ಅವರ ವಿರುದ್ಧ ಕೂಡ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಎಫ್‌ಐಆರ್ ದಾಖಲಾಗಿರುವ ಇಬ್ಬರಲ್ಲಿ ಒಬ್ಬರನ್ನು ಬಂಧಿಸಲಾಗಿದೆ ಮತ್ತು ಶೀಘ್ರದಲ್ಲೇ ಇನ್ನೊಬ್ಬನನ್ನು ಸಹ ಬಂಧಿಸಲಾಗುವುದು ಎಂದು ಸುಧೀರ್‌ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಪೊಲೀಸರ ಸೂಚನೆಗಳು:
-ಅಕ್ರಮವಾಗಿ ವಾಸಿಸುವ ಯಾರೇ ಆಗಿರಲಿ, ಅವರನ್ನು ಕಾನೂನುಬದ್ಧವಾಗಿ ವಿಚಾರಣೆಗೆ ಒಳಪಡಿಸಲಾಗುವುದು ಮತ್ತು ಯಾವುದೇ ವಿನಾಯಿತಿ ಇಲ್ಲದೆ ಕಾನೂನು ಪ್ರಕಾರ ಗಡೀಪಾರು ಮಾಡಲಾಗುವುದು.
-ಯಾರ ಮೇಲಾದರೂ ದಾಳಿ ನಡೆಸುವುದು ಅಪರಾಧವಾಗಿದ್ದು, ಅಕ್ರಮವಾಗಿ ವಾಸಿಸುವವರಾಗಿದ್ದರೂ ಅಥವಾ ಬೇರೆ ಯಾರೇ ಆಗಿದ್ದರೂ, ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ಕಾನೂನು ಉಲ್ಲಂಘನೆಗೆ ಯಾವುದೇ ಸಹಾನುಭೂತಿ ಇರುವುದಿಲ್ಲ; ಪ್ರತಿಯೊಬ್ಬರ ಮೇಲೂ ಯಾವುದೇ ಭೇದಭಾವವಿಲ್ಲದೆ ಕಾನೂನಿನ ಪ್ರಕಾರವೇ ಕ್ರಮ ಜರುಗಿಸಲಾಗುವುದು.

error: Content is protected !!