ಇರಾನ್ ವಿರುದ್ಧ ಒಂದಾದ ಮುಸ್ಲಿಂ ರಾಷ್ಟ್ರಗಳು; ಇಸ್ಲಾಮಿಕ್ ಜಗತ್ತಿನಲ್ಲೇ ಭೀಕರ ಬಿರುಕು!?

ರಿಯಾದ್/ಅಬುಧಾಬಿ: ಮಧ್ಯಪ್ರಾಚ್ಯದ ಯುದ್ಧ ಈಗ ಹೊಸ ತಿರುವು ಪಡೆದುಕೊಂಡಿದೆ. ಇರಾನ್ ಕೇವಲ ಇಸ್ರೇಲ್ ಮತ್ತು ಅಮೆರಿಕವನ್ನು ಮಾತ್ರವಲ್ಲದೆ, ತನ್ನ ನೆರೆಯ ಮುಸ್ಲಿಂ ರಾಷ್ಟ್ರಗಳ ಮೇಲೆಯೂ ಕ್ಷಿಪಣಿ ದಾಳಿ ನಡೆಸುವ ಮೂಲಕ ಇಡೀ ಇಸ್ಲಾಮಿಕ್ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿದೆ.‌

ಯುಎಇ, ಬಹ್ರೇನ್, ಕತಾರ್, ಕುವೈತ್ ಮತ್ತು ಜೋರ್ಡಾನ್‌ನಂತಹ ಮುಸ್ಲಿಂ ರಾಷ್ಟ್ರಗಳ ಮೇಲೆ ಇರಾನ್ ನಡೆಸಿರುವ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ಸೌದಿ ಅರೇಬಿಯಾ ತೀವ್ರವಾಗಿ ಖಂಡಿಸಿದೆ. ಈ ದೇಶಗಳಲ್ಲಿ ಅಮೆರಿಕಾದ ಸೇನಾ ನೆಲೆ ಇದ್ದು, ಅದನ್ನು ಗುರಿಯಾಗಿಸಿ ಇರಾನ್‌ ದಾಳಿ ನಡೆಸಿದೆ. ಈ ಮೂಲಕ ಇರಾನ್‌ ತನ್ನ ತನ್ನ ಮೇಲೆ ದಾಳಿ ನಡೆಸಲು ಅವಕಾಶ ಕೊಟ್ಟ ಮುಸ್ಲಿಂ ರಾಷ್ಟ್ರಗಳ ಮೇಲೆಯೇ ತಿರುಗಿ ಬಿದ್ದಿದೆ ಎನ್ನಲಾಗುತ್ತಿದೆ.

ಇರಾನ್ ಉಡಾಯಿಸಿದ ಕ್ಷಿಪಣಿಗಳ ತುಣುಕುಗಳು ಅಬುಧಾಬಿಯಲ್ಲಿ ಬಿದ್ದು ಸಾವು-ನೋವು ಸಂಭವಿಸಿರುವುದು ಅರಬ್ ರಾಷ್ಟ್ರಗಳನ್ನು ಕೆರಳಿಸಿದೆ.

ಸೌದಿ ಅರೇಬಿಯಾ ಮತ್ತು ಯುಎಇ ಇರಾನ್‌ನ ಕ್ಷಿಪಣಿಗಳನ್ನು ತಡೆಯಲು ತಮ್ಮ ವಾಯುಪ್ರದೇಶ ಮತ್ತು ರಕ್ಷಣಾ ವ್ಯವಸ್ಥೆಯನ್ನು ಸನ್ನದ್ಧಗೊಳಿಸಿವೆ. ಜೋರ್ಡಾನ್ ಮತ್ತು ಕತಾರ್ ಇರಾನ್ ದಾಳಿಯಿಂದ ರಕ್ಷಿಸಿಕೊಳ್ಳಲು ಅಮೆರಿಕ ನಿರ್ಮಿತ ‘ಪೇಟ್ರಿಯಾಟ್’ ಕ್ಷಿಪಣಿ ತಡೆ ವ್ಯವಸ್ಥೆಯನ್ನು ಬಳಸುತ್ತಿವೆ. ಸಿರಿಯಾ ಮತ್ತು ಲೇಬನಾನ್ ವಾಯುಪ್ರದೇಶವನ್ನು ಇಸ್ರೇಲ್ ದಾಳಿಗೆ ಬಳಸಿಕೊಳ್ಳುತ್ತಿರುವುದು ಇರಾನ್‌ಗೆ ನುಂಗಲಾರದ ತುತ್ತಾಗಿದೆ.

ದಕ್ಷಿಣ ಇರಾನ್‌ನ ಮಿನಾಬ್‌ನಲ್ಲಿ ಇಸ್ರೇಲ್-ಅಮೆರಿಕ ದಾಳಿಗೆ ಐವರು ಶಾಲಾ ವಿದ್ಯಾರ್ಥಿನಿಯರು ಬಲಿಯಾಗಿರುವುದು ಇಡೀ ಜಗತ್ತನ್ನು ದುಃಖಕ್ಕೀಡುಮಾಡಿದೆ. ಆದರೆ, ಈ ಯುದ್ಧವನ್ನು ಮೈಮೇಲೆ ಎಳೆದುಕೊಂಡ ಇರಾನ್ ಸರ್ಕಾರದ ಧೋರಣೆಯೇ ಈ ಮುಗ್ಧ ಮಕ್ಕಳ ಸಾವಿಗೆ ಕಾರಣ ಎಂದು ಹಲವು ಅರಬ್ ರಾಷ್ಟ್ರಗಳ ಮಾಧ್ಯಮಗಳು ವರದಿ ಮಾಡುತ್ತಿವೆ.

ಇತಿಹಾಸದಲ್ಲಿ ಮೊದಲ ಬಾರಿಗೆ ಇರಾನ್ ಸಂಪೂರ್ಣವಾಗಿ ಒಂಟಿಯಾದಂತೆ ಕಾಣುತ್ತಿದೆ. ಅಮೆರಿಕ-ಇಸ್ರೇಲ್ ದಾಳಿಯ ನಡುವೆ, ಇತ್ತ ತನ್ನದೇ ನೆರೆಯ ಮುಸ್ಲಿಂ ರಾಷ್ಟ್ರಗಳೊಂದಿಗೆ ಯುದ್ಧಕ್ಕೆ ಇಳಿದಿರುವುದು ಇರಾನ್ ಪಾಲಿಗೆ ʻಆತ್ಮಹತ್ಯಾತ್ಮಕ’ ನಿರ್ಧಾರವಾಗಬಹುದು ಎನ್ನಲಾಗುತ್ತಿದೆ.

ಶಿಯಾ vs ಸುನ್ನಿ?
ಇರಾನ್ ದೇಶವು ಜಾಗತಿಕವಾಗಿ ಶಿಯಾ ಮುಸ್ಲಿಂ ರಾಷ್ಟ್ರಗಳ ನೇತೃತ್ವವನ್ನು ವಹಿಸಿದ್ದರೆ, ಇತ್ತ ಸೌದಿ ಅರೇಬಿಯಾ ಮತ್ತು ಇತರ ಗಲ್ಫ್ ರಾಷ್ಟ್ರಗಳು ಪ್ರಧಾನವಾಗಿ ಸುನ್ನಿ ಮುಸ್ಲಿಂ ಪಂಥವನ್ನು ಪ್ರತಿನಿಧಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ ಇರಾನ್ ಮಧ್ಯಪ್ರಾಚ್ಯದಾದ್ಯಂತ ತನ್ನ ಸೇನಾ ಮತ್ತು ರಾಜಕೀಯ ಪ್ರಭಾವವನ್ನು ವಿಸ್ತರಿಸಲು ನಡೆಸುತ್ತಿರುವ ನಿರಂತರ ಪ್ರಯತ್ನಗಳು ಸುನ್ನಿ ರಾಷ್ಟ್ರಗಳಲ್ಲಿ ಭೀತಿ ಮತ್ತು ಆತಂಕವನ್ನು ಮೂಡಿಸಿವೆ. ಈ ಪಂಥೀಯ ಸಂಘರ್ಷ ಮತ್ತು ಪ್ರಾದೇಶಿಕ ನಾಯಕತ್ವಕ್ಕಾಗಿ ನಡೆಯುತ್ತಿರುವ ಪೈಪೋಟಿಯೇ ಇಂದು ಮುಸ್ಲಿಂ ರಾಷ್ಟ್ರಗಳು ಇರಾನ್ ವಿರುದ್ಧ ತಿರುಗಿ ನಿಲ್ಲಲು ಮುಖ್ಯ ಕಾರಣವಾಗಿದೆ.

error: Content is protected !!