ಇಸ್ರೇಲ್- ಅಮೆರಿಕದ ಜಂಟಿ ದಾಳಿಗೆ ಇರಾನ್‌ ಸೇನಾ ಮಹಾದಂಡನಾಯಕ ಬಲಿ? ಟ್ರಂಪ್ ʻಬಿಗ್ ವಾರ್ನಿಂಗ್’!

ಟೆಹ್ರಾನ್/ಜೆರುಸಲೆಮ್: ಮಧ್ಯಪ್ರಾಚ್ಯದ ರಣಾಂಗಣದಲ್ಲಿ ಸಂಭವಿಸಿರುವ ಅತಿದೊಡ್ಡ ಬೆಳವಣಿಗೆಯೊಂದರಲ್ಲಿ, ಇರಾನ್‌ನ ರಕ್ಷಣಾ ಸಚಿವ ಹಾಗೂ ಸೇನಾ ಮಹಾದಂಡನಾಯಕ ಮೇಜರ್ ಜನರಲ್ ಅಮೀರ್ ಹತಾಮಿ ಅವರು ಇಸ್ರೇಲ್ ಮತ್ತು ಅಮೆರಿಕದ ವೈಮಾನಿಕ ದಾಳಿಯಲ್ಲಿ ಹತರಾಗಿದ್ದಾರೆ ಎಂದು ವರದಿಯಾಗಿದೆ. ರಾಜಧಾನಿ ಟೆಹ್ರಾನ್ ಮೇಲೆ ಶನಿವಾರ ಮುಂಜಾನೆ ನಡೆದ ಸರಣಿ ಕ್ಷಿಪಣಿ ದಾಳಿಯಲ್ಲಿ ಈ ದೈತ್ಯ ಸೇನಾ ನಾಯಕ ಬಲಿಯಾಗಿದ್ದಾರೆ ಎಂಬ ಸುದ್ದಿ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ.

ಸರ್ವೋಚ್ಚ ನಾಯಕನ ಬಲಗೈ ಬಂಟನ ಅಂತ್ಯ?
1966ರಲ್ಲಿ ಜನಿಸಿದ ಅಮೀರ್ ಹತಾಮಿ, ಕೇವಲ 14ನೇ ವಯಸ್ಸಿಗೆ ಸೇನೆ ಸೇರಿ ಇರಾನ್-ಇರಾಕ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಧೀಮಂತ ನಾಯಕ. 2025ರಲ್ಲಿ ಅಲಿ ಖಮೇನಿಯವರಿಂದ ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ನೇಮಕಗೊಂಡಿದ್ದ ಇವರು, ಇರಾನ್‌ನ ರಕ್ಷಣಾ ವ್ಯವಸ್ಥೆಯ ಬೆನ್ನೆಲುಬಾಗಿದ್ದರು. ಅವರ ಸಾವಿನ ಸುದ್ದಿ ಇರಾನ್ ಸೇನೆಗೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿದೆ ಎನ್ನಲಾಗುತ್ತಿದೆ.

ದಾಳಿಯ ಬೆನ್ನಲ್ಲೇ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇರಾನ್ ವಿರುದ್ಧ ನಾವು ಅಧಿಕೃತವಾಗಿ ಬೃಹತ್ ಯುದ್ಧ ಕಾರ್ಯಾಚರಣೆ ಆರಂಭಿಸಿದ್ದೇವೆ. ಇರಾನಿ ಆಡಳಿತದಿಂದ ಅಮೆರಿಕನ್ನರಿಗೆ ಎದುರಾಗಿದ್ದ ಬೆದರಿಕೆಯನ್ನು ಬುಡಸಮೇತ ಕಿತ್ತೆಸೆಯುವುದೇ ನಮ್ಮ ಗುರಿ” ಎಂದು ಘರ್ಜಿಸಿದ್ದಾರೆ. ಇರಾನ್‌ನ ಕ್ಷಿಪಣಿ ನೆಲೆಗಳು ಮತ್ತು ನೌಕಾಪಡೆಯನ್ನು ಧ್ವಂಸಗೊಳಿಸುವುದಾಗಿ ಅವರು ಎಚ್ಚರಿಸಿದ್ದಾರೆ.

ಇರಾನ್‌ನಿಂದ 70 ಬ್ಯಾಲಿಸ್ಟಿಕ್ ಕ್ಷಿಪಣಿಗಳ ತಿರುಗೇಟು!
ಇತ್ತ ತನ್ನ ರಕ್ಷಣಾ ಸಚಿವನ ಸಾವಿಗೆ ಆಕ್ರೋಶಗೊಂಡಿರುವ ಇರಾನ್, ಇಸ್ರೇಲ್ ಮೇಲೆ ಏಕಕಾಲದಲ್ಲಿ 50 ರಿಂದ 70 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಇದರಿಂದಾಗಿ ಇಸ್ರೇಲ್‌ನ ಟೆಲ್ ಅವಿವ್ ನಗರದಾದ್ಯಂತ ಸೈರನ್‌ಗಳು ಮೊಳಗುತ್ತಿದ್ದು, ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಜನರು ಬಂಕರ್‌ಗಳ ಒಳಗೆ ಅಡಗಿಕೂರಲು ಸೂಚಿಸಲಾಗಿದೆ.

ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಇಂಟರ್ನೆಟ್ ಸಂಪರ್ಕ ಶೇ. 54ಕ್ಕೆ ಕುಸಿದಿದ್ದು, ಇಡೀ ದೇಶ ಬಾಹ್ಯ ಜಗತ್ತಿನಿಂದ ಸಂಪರ್ಕ ಕಳೆದುಕೊಳ್ಳುತ್ತಿದೆ. ಅಲ್ಲದೆ ಇಸ್ಫಹಾನ್, ತಬ್ರಿಜ್, ಕರಾಜ್ ಮತ್ತು ಕೆರ್ಮನ್‌ಶಾ ನಗರಗಳಲ್ಲಿ ಭೀಕರ ಸ್ಫೋಟಗಳು ಸಂಭವಿಸುತ್ತಿವೆ. ಇರಾನ್ ಮತ್ತು ಇಸ್ರೇಲ್‌ನಲ್ಲಿರುವ ಭಾರತೀಯರು ಮನೆಯಿಂದ ಹೊರಬರದಂತೆ ಭಾರತೀಯ ರಾಯಭಾರ ಕಚೇರಿ ಕಟ್ಟುನಿಟ್ಟಿನ ಆದೇಶ ನೀಡಿದೆ.

ಮಧ್ಯಪ್ರಾಚ್ಯದಲ್ಲಿ ಈಗ ಕೇವಲ ಕ್ಷಿಪಣಿಗಳ ಆರ್ಭಟ ಮತ್ತು ಮೃತ್ಯುವಿನ ಛಾಯೆ ಮಾತ್ರ ಕಾಣಿಸುತ್ತಿದೆ. ಈ ಮಹಾಯುದ್ಧ ಮುಂದಿನ ಕೆಲವು ಗಂಟೆಗಳಲ್ಲಿ ಇಡೀ ವಿಶ್ವದ ಆರ್ಥಿಕತೆಯ ಮೇಲೆ ಭೀಕರ ಪರಿಣಾಮ ಬೀರಲಿದೆ ಎಂಬ ಆತಂಕ ಮನೆಮಾಡಿದೆ.

error: Content is protected !!