ಸ್ಕೂಟರ್‌ ಕಳ್ಳರು ಸೆರೆ

ಮಣಿಪಾಲ: ಸ್ಕೂಟರ್ ಕಳವು ಪ್ರಕರಣವನ್ನು ಮಣಿಪಾಲ ಪೊಲೀಸರು ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಕಿರಣ್ ಬಿ.ಎನ್. (32) ಹಾಗೂ ಶಿವಮೊಗ್ಗ ಜಿಲ್ಲೆಯ ದುರನಮಲ್ಲಿ ನಿವಾಸಿ ಯೋಗೇಶ್ ನಾಯ್ಕ ಎನ್. (22) ಬಂಧಿತರು.

ಕಳೆದ ಆಗಸ್ಟ್ 30ರಂದು, ಹೆರ್ಗಾ ಗ್ರಾಮದ ಪ್ರದೀಪ್ ಸಾಲ್ಯಾನ್ ಎಂಬವರು ತಮ್ಮ 30,000 ರೂ. ಮೌಲ್ಯದ ಸ್ಕೂಟರ್ ಅನ್ನು ಮಣಿಪಾಲ ಕಾಯಿನ್ ಸರ್ಕಲ್ ಬಳಿ ನಿಲ್ಲಿಸಿದ್ದರು. ಇದನ್ನು ಈ ಇಬ್ಬರು ಖದೀಮರು ಎಗರಿಸಿದ್ದರು. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಡಿವೈಎಸ್ಪಿ ಪ್ರಭು ಡಿ.ಟಿ. ಅವರ ಮಾರ್ಗದರ್ಶನದಲ್ಲಿ, ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ನಡೆಸಲಾಗಿದ್ದು, ಪೊಲೀಸ್ ಉಪನಿರೀಕ್ಷಕರಾದ ಅನಿಲ್ ಬಿ.ಎಂ., ಅಕ್ಷಯ ಕುಮಾರಿ ಎಸ್.ಎನ್. ಹಾಗೂ ಸಿಬ್ಬಂದಿ ವಿಶ್ವಜಿತ್, ಚೇತನ್, ಅಜ್ಮಲ್, ರವಿರಾಜ್ ಮತ್ತು ಮಂಜುನಾಥ್ ಒಳಗೊಂಡ ತಂಡವು ಜನವರಿ 7ರಂದು ಆರೋಪಿಗಳನ್ನು ಬಂಧಿಸಿ, ಕಳವುಗೊಂಡ ಸ್ಕೂಟರ್ ಅನ್ನು ವಶಪಡಿಸಿಕೊಂಡಿದೆ.

ಬಂಧಿತ ಆರೋಪಿ ಕಿರಣ್ ಬಿ.ಎನ್. ವಿರುದ್ಧ ಈ ಹಿಂದೆಯೂ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ.


 

error: Content is protected !!