ಮಂಗಳೂರು: ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಜನಜೀವನ, ರೈತರ ಸಮಸ್ಯೆ ಹಾಗೂ ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆಯಾಗಬೇಕಿದ್ದರೆ, ಮುಖ್ಯಮಂತ್ರಿ ಬದಲಾವಣೆಯ ವಿಚಾರವೇ ಕೇಂದ್ರಬಿಂದುವಾಗಿತ್ತು ಅಧಿವೇಶನವನ್ನು ವಿಸ್ತರಿಸಿ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚೆ ನಡೆಸುವಂತೆ ಲಿಖಿತವಾಗಿ ಕೋರಿದರೂ ಸರ್ಕಾರ ಸ್ಪಂದಿಸಿಲ್ಲ. ಉತ್ತರ ಕರ್ನಾಟಕ ಸಮಸ್ಯೆಗಳ ಹೆಸರಿನಲ್ಲಿ ಅಧಿವೇಶನ ಕರೆಯಲಾಗಿದ್ದರೂ, ಅಲ್ಲಿ ಅಭಿವೃದ್ಧಿಗಿಂತ ಅಧಿಕಾರದ ಕುರಿತ ಚರ್ಚೆಗಳೇ ನಡೆದವು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಸಂಪೂರ್ಣ ನೆನೆಗುದಿಗೆ ಬಿದ್ದಿದ್ದು, ಇದರಿಂದ ಜನರ ಗಮನ ಬೇರೆಡೆಗೆ ತಿರುಗಿಸಲು ಸರ್ಕಾರ ಈಗ ವಿ–ಬಿಜಿ ರಾಮ್ ಜಿ ಮಸೂದೆ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಈ ಮಸೂದೆ ಕುರಿತು ಚರ್ಚೆಗೆ ಬಿಜೆಪಿ ಸದಾ ಸಿದ್ಧವಾಗಿದೆ. ಸಂವಿಧಾನದಲ್ಲಿ ಒಕ್ಕೂಟ ವ್ಯವಸ್ಥೆ ಸ್ಪಷ್ಟವಾಗಿದ್ದು, ಸಂಸತ್ತಿನಲ್ಲಿ ಮಸೂದೆಗಳ ಕುರಿತು ಚರ್ಚೆಯಾಗುವಾಗ ಪ್ರತಿಪಕ್ಷ ಹೇಗೆ ವರ್ತಿಸಿದೆ ಎಂಬುದನ್ನು ಜನ ಗಮನಿಸಿದ್ದಾರೆ. ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ಮಾತನಾಡಲು ಎದ್ದಾಗ ಪ್ರತಿಪಕ್ಷ ಅವಕಾಶ ಕೊಡದೆ ಗಲಾಟೆ ನಡೆಸಿದ್ದು, ಇದು ಅಸಂವಿಧಾನಿಕ ಹಾಗೂ ಬೇಜವಾಬ್ದಾರಿತನದ ನಿದರ್ಶನ ಎಂದರು.

ಜನಧನ್–ಬ್ಯಾಂಕ್–ಆಧಾರ್–ಮೊಬೈಲ್ ಸಂಯೋಜನೆಯಿಂದ ಆರ್ಥಿಕ ವ್ಯವಸ್ಥೆಯಲ್ಲಿ ಕ್ರಾಂತಿ ಆಗುತ್ತದೆ ಎಂದಾಗ ವಿಪಕ್ಷ ಲೇವಡಿ ಮಾಡಿತ್ತು. ಆದರೆ ಇಂದು ಮೊಬೈಲ್ ಹಣಕಾಸು ವ್ಯವಹಾರಗಳಲ್ಲಿ ಭಾರತ ಜಗತ್ತಿನಲ್ಲಿ ನಂಬರ್ ಒನ್ ಆಗಿದೆ ಎಂದು ಅವರು ಉಲ್ಲೇಖಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕುರಿತು ಅಪಪ್ರಚಾರ ಮಾಡಿ ಜನರಲ್ಲಿ ಭಯ ಹುಟ್ಟಿಸಲಾಗುತ್ತಿದೆ. ಪ್ರತಿಪಕ್ಷದಲ್ಲಿ ರಚನಾತ್ಮಕ ರಾಜಕೀಯ ಕಾಣೆಯಾಗಿದೆ; ಅಧಿಕಾರದಲ್ಲಿಲ್ಲದ ಹತಾಶೆ ಅವರ ಮಾತುಗಳಲ್ಲಿ ಪ್ರತಿಬಿಂಬಿಸುತ್ತದೆ ಎಂದು ನಾಯಕ್ ಹೇಳಿದರು. ಮುಖ್ಯಮಂತ್ರಿ ನೀಡುವ ಅಂಕಿ–ಅಂಶಗಳನ್ನು ಜನ ನಂಬಬಾರದು, ಅವರು ಹೇಳುವುದೇ ಸುಳ್ಳನ್ನು. ನಿಜಾಂಶ ಕೊಟ್ಟರೆ ಗಮನಿಸುತ್ತಿಲ್ಲ. ಪತ್ರಕರ್ತರು ಕೇಳಿದರೆ ಅವರಿಗೆ ಜೋರು ಮಾಡುತ್ತಾರೆ. ಕಳೆದ ಬಜೆಟ್‌ನಲ್ಲಿ ಘೋಷಿಸಿದ ಅನುದಾನದ ಶೇ.50 ಕೂಡ ಖರ್ಚಾಗಿಲ್ಲ. ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಮತ್ತು ಅಭಿವೃದ್ಧಿ ಕುಂಟಿತವಾಗಿರುವುದೇ ರಾಜ್ಯದ ವಾಸ್ತವ ಚಿತ್ರ ಎಂದು ಅವರು ಹೇಳಿದರು. ರಾಜ್ಯದ ರಸ್ತೆಗಳು ಗುಂಡಿಗಳಿಂದ ತುಂಬಿದ್ದು, ಆಡಳಿತ ಶೂನ್ಯಾವಸ್ಥೆಯಲ್ಲಿದೆ ಎಂದು ಆರೋಪಿಸಿದರು.

ಮನರೇಗಾ ಯೋಜನೆಯ ಹೆಸರಿನ ಬಗ್ಗೆ ನಡೆಯುತ್ತಿರುವ ರಾಜಕೀಯಕ್ಕೂ ಅವರು ಪ್ರತಿಕ್ರಿಯಿಸಿದರು. 1960ರಲ್ಲಿ ‘ಕೂಲಿಗಾಗಿ ಕಾಳು’, ನಂತರ ಜವಹಾರ್ ರೋಜ್ಗಾರ್ ಯೋಜನೆ, 2005ರಲ್ಲಿ ನರೇಗಾ, 2009ರಲ್ಲಿ ಮಹಾತ್ಮ ಗಾಂಧಿ ಹೆಸರು ಸೇರಿಸಿ ಮನ್‌ರೇಗಾ ಎಂದು ಬದಲಾಯಿಸಲಾಯಿತು. ಗಾಂಧಿ ಹೆಸರು ರಾಜಕೀಯ ಉದ್ದೇಶದಿಂದ ಬಳಕೆ ಮಾಡಲಾಗಿದೆ ಎಂದು ಟೀಕಿಸಿದರು. ಆದರೆ 2014ರ ನಂತರ ಮೋದಿ ಸರ್ಕಾರ ಬಂದ ಬಳಿಕ ಬಡತನ ಪ್ರಮಾಣ 25ರಿಂದ 7ಕ್ಕೆ ಇಳಿದಿದೆ ಎಂದು ಹೇಳಿದರು.
ಮನ್‌ಮೋಹನ್ ಸಿಂಗ್ ಅವಧಿಯಲ್ಲಿ ಮನ್‌ರೇಗಾ ಯೋಜನೆಗೆ 2 ಲಕ್ಷ ಕೋಟಿ ರೂ. ವೆಚ್ಚವಾದರೆ, ಮೋದಿ ಸರ್ಕಾರದಲ್ಲಿ 8 ಲಕ್ಷ ಕೋಟಿ ರೂ. ವೆಚ್ಚವಾಗಿದೆ. 100 ದಿನಗಳ ಕೆಲಸವನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ, ಕೃಷಿ ಅವಧಿಯಲ್ಲಿ 60 ದಿನಗಳ ವಿಶ್ರಾಂತಿ ಕಲ್ಪಿಸಲಾಗಿದೆ. ಹಿಂದೆ ಯಂತ್ರೋಪಕರಣಗಳಿಂದ ಕೆಲಸ ನಡೆಯುತ್ತಿದ್ದರೆ ಈಗ ನಿಜ ಕಾರ್ಮಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಕೂಲಿ ಒಂದು ವಾರ ಅಥವಾ 15 ದಿನಗಳೊಳಗೆ ನೀಡಬೇಕು; ವಿಳಂಬವಾದರೆ ದಂಡ ಹಾಗೂ ನಿರುದ್ಯೋಗ ಭತ್ಯೆ ನೀಡುವ ವ್ಯವಸ್ಥೆ ಜಾರಿಯಲ್ಲಿದೆ ಎಂದು ವಿವರಿಸಿದರು.

ಈಗ ತರಲಾಗಿರುವ ತಾಂತ್ರಿಕ ವ್ಯವಸ್ಥೆಗಳಿಂದ ವಿ–ಬಿಜಿ ರಾಮ್ ಜಿ ಮಸೂದೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ. ರಾಜ್ಯಕ್ಕೂ ಜವಾಬ್ದಾರಿ ಬರುವಂತೆ 60–40 ಅನುದಾನ ಅನುಪಾತವನ್ನು ತರಲಾಗಿದೆ ಎಂದು ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಡಾ.ಮಂಜುಳಾ ರಾವ್, ಹರೀಶ್ ಮೂಡುಶೆಡ್ಡೆ, ಅರುಣ್ ಶೇಟ್, ಸತೀಶ್ ಪ್ರಭು, ರಾಜಗೋಪಾಲ ರೈ ಮತ್ತಿತರರು ಉಪಸ್ಥಿತರಿದ್ದರು.