ಕೇರಳ: ಚಾಲಕನ ನಿಯಂತ್ರಣ ತಪ್ಪಿದ ಕಾರು ಎದುರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಸೋಮವಾರ(ಜ.12) ಜಿಲ್ಲೆಯ ಮೋನಿಪಳ್ಳಿ ಸಮೀಪದ ಎಂಸಿ ರಸ್ತೆಯಲ್ಲಿ ಸಂಭವಿಸಿದೆ.

ನೀಂದೂರು ನಿವಾಸಿಗಳಾದ ಸುರೇಶ್ (52), ಅವರ ಪತ್ನಿ ಅಂಬಿಲಿ (48) ಮತ್ತು ಅವರ ಮೊಮ್ಮಗ ಅರ್ಜಿತ್ (7) ಮೃತ ದುರ್ದೈವಿಗಳು.

ಮೃತರು ಎರ್ನಾಕುಲಂ ಜಿಲ್ಲೆಯ ಸುಪ್ರಸಿದ್ಧ ತಿರುವೈರಾನಿಕುಲಂ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ತಮ್ಮ ಮನೆಗೆ ಮರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಇತರ ಮೂವರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಸಂಬಂಧಿಸಿದಂತೆ ಕುರವಿಲಂಗಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.