ಬಾಂಗ್ಲಾದೇಶಕ್ಕೆ ಜೈಕಾರ ಹಾಕಿದ ಮುಸ್ಲಿಂ ಮಹಿಳೆ ಬಂಧನ

ಬೆಂಗಳೂರು: ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಮುಸ್ಲಿಂ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಸರ್ಬಾನು ಖಾತುನ್ (25) ಬಂಧಿತ ಮಹಿಳೆ. ಈಕೆ ಸರ್ಬಾನು ಖಾತುನ್ ಹುಲಿಮಂಗಲದ ಪೋಡು ಪ್ರದೇಶದ ಬಳಿ ಇರುವ ಶೆಡ್‌ನಲ್ಲಿ ವಾಸವಾಗಿದ್ದಳು.

ಕಳೆದ ಮೂರು ದಿನಗಳ ಹಿಂದೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಕ್ರಮ ವಲಸಿಗರ ಕುರಿತು ಕಾರ್ಯಾಚರಣೆ ನಡೆಸಿ, ಶೆಡ್‌ಗಳ ಮೇಲೆ ದಾಳಿ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಸಂದರ್ಭದಲ್ಲಿ, ಅಕ್ರಮವಾಗಿ ವಾಸವಾಗಿದ್ದರೆನ್ನಲಾದ ಜಹಿದುಲ್ ಇಸ್ಲಾಂ (35) ಮತ್ತು ಫಿರ್ದೋಸ್ (32) ಎಂಬಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಈ ಶೆಡ್‌ಗಳ ಸಮೀಪದಲ್ಲೇ ವಾಸವಾಗಿದ್ದ ಸರ್ಬಾನು ಖಾತುನ್, ಶೆಡ್‌ಗಳನ್ನು ತೆರವುಗೊಳಿಸುವ ವೇಳೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಹಿಂದೂ ಕಾರ್ಯಕರ್ತರು ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ ಉದ್ದಟತನದಿಂದ ‘ಜೈ ಬಾಂಗ್ಲಾ’ ಎಂದು ಘೋಷಣೆ ಕೂಗಿದ್ದಾಳೆ ಎನ್ನಲಾಗಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದರ ಆಧಾರದ ಮೇಲೆ ಹೆಬ್ಬಗೋಡಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ, ದಾಖಲೆಗಳ ಪರಿಶೀಲನೆಗಾಗಿ ಮಹಿಳೆಯನ್ನು ಎಫ್‌ಆರ್‌ಆರ್‌ಒ (ಫಾರಿನರ್ಸ್ ರೀಜನಲ್ ರಿಜಿಸ್ಟ್ರೇಷನ್ ಆಫೀಸ್) ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಈ ಬಗ್ಗೆ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!