ಮಂಗಳೂರು: ಯಕ್ಷಗಾನ ಕರಾವಳಿಯ ಶ್ರೇಷ್ಠ ಕಲೆ. ಈ ಕಲೆಯನ್ನು ಕೇವಲ ಜಿಲ್ಲೆಗೆ ಸೀಮಿತಗೊಳಿಸದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಮಕ್ಕಳಿಗೆ ಯಕ್ಷಶಿಕ್ಷಣ ಕಲಿಸುವ ಮೂಲಕ ವಿಸ್ತರಣೆಯಾಗಲಿ, ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ವಸತಿ ಶಾಲೆಗಳಲ್ಲಿ ಯಕ್ಷಶಿಕ್ಷಣವನ್ನು ನೀಡುವ ಮೂಲಕ ಯಕ್ಷಗಾನ ಕಲೆಯನ್ನು ರಾಜ್ಯದಾದ್ಯಂತ ವಿಸ್ತರಿಸುತ್ತಿರುವ ಕೀರ್ತಿ ಪ್ರಖ್ಯಾತ ಯುವ ಭಾಗವತರಾದ ಶ್ರೀ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನಿಗೆ ಸಲ್ಲುತ್ತದೆ ಎಂದು ವಿಧಾನಸಭಾಧ್ಯಕ್ಷ ಯು ಟಿ ಖಾದರ್ ತಿಳಿಸಿದರು.


ಅಡ್ಯಾರ್ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಘಟಕಗಳ ಸಹಯೋಗದೊಂದಿಗೆ ನಡೆದ ಯಕ್ಷಧ್ರುವ- ಯಕ್ಷಶಿಕ್ಷಣ ಯೋಜನೆಯ ವಿದ್ಯಾರ್ಥಿಗಳ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ 2025-26ರ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಯಕ್ಷಗಾನದ ಮೂಲಕ ಪುರಾಣ, ಇತಿಹಾಸವನ್ನು ವಿಶ್ವಕ್ಕೆ ಪರಿಚಯಿಸಿದ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕೆಲಸ ಕಾರ್ಯ ಶ್ಲಾಘನೀಯ. ಸರಕಾರದ ಮೂಲಕ ಯಾವುದೇ ಸಹಕಾರ ಬೇಕಾದಲ್ಲಿ ಖಂಡಿತ ಮಾಡುತ್ತೇನೆ ಎಂದು ಯು.ಟಿ ಖಾದರ್ ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ಕಳೆದ ವರ್ಷ ಒಡ್ಡೂರಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಸಮ್ಮುಖದಲ್ಲಿ ನಡೆದ ಮಕ್ಕಳ ರಂಗಪ್ರವೇಶ ನೋಡಿ ಸಂತೋಷ ಪಟ್ಟಿದ್ದೆ. ಅಂದು ನಾನು ಒಡ್ಡೂರಿನಲ್ಲಿ ಘೋಷಣೆ ಮಾಡಿದಂತೆ ಅಡ್ಯಾರ್ ಸಹ್ಯಾದ್ರಿ ಶಿಕ್ಷಣ ದೇಗುಲದಲ್ಲಿ 700 ಮಕ್ಕಳು ಯಕ್ಷಗಾನದ ರಂಗಪ್ರವೇಶ ಮಾಡಿದ್ದು ಕಲಾದೇವಿ ಸರಸ್ವತಿಯ ಸೇವೆ ಮಾಡಿದಂತಾಯಿತು. ಯಕ್ಷಗಾನದಲ್ಲಿ ಪದವಿ ಮಾಡುವ ಉದ್ದೇಶ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ಇದ್ದರೆ ಸರಕಾರದ ಮಟ್ಟದಲ್ಲಿ ಸಹಕಾರ ಮಾಡುವುದಾಗಿ ತಿಳಿಸಿದರು.


ಇನ್ನೋರ್ವ ಮುಖ್ಯ ಅತಿಥಿ ರಮಾನಾಥ ರೈ ಮಾತನಾಡಿ ಕೇರಳದಲ್ಲಿ ಕತಕಳಿಗೆ ನೀಡಿದಂತಹ ಪ್ರೋತ್ಸಾಹ ಕರ್ನಾಟಕ ಸರಕಾರದಿಂದ ಯಕ್ಷಗಾನಕ್ಕೆ ದೊರೆಯಲಿಲ್ಲ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಪ್ರಯತ್ನಿಸ ಬೇಕು ಎಂದರು.
ಯಕ್ಷಗಾನಕ್ಕೆ ದೀರ್ಘಕಾಲಿಕವಾದ ಇತಿಹಾಸ ಇದೆ. ಇದನ್ನು ಮುಂದುವರಿಸಲು ಎಲ್ಲರ ಸಹಕಾರ ಬೇಕು ಎಂದು ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.
ಸಮಾರಂಭದಲ್ಲಿ ಯಕ್ಷಧ್ರುವ ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಕೆ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿಗಳಾದ ಬಾಳ ಜಗನ್ನಾಥ ಶೆಟ್ಟಿ ಮತ್ತು ಪ್ರದೀಪ್ ಆಳ್ವ ಕದ್ರಿ, ಸರಪಾಡಿ ಅಶೋಕ ಶೆಟ್ಟಿ, ಯಕ್ಷಶಿಕ್ಷಣದ ಸಂಯೋಜಕ ದೀವಿತ್ ಎಸ್ ಕೆ ಪೆರಾಡಿ ಹಾಗೂ ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಪುರುಷೋತ್ತಮ ಭಂಡಾರಿ ಪ್ರಸ್ತಾವನೆಗೈದರು. ಸಲಹಾ ಸಮಿತಿ ಸದಸ್ಯ ದೇವದಾಸ ಶೆಟ್ಟಿ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು. ಮೂರನೇ ವರ್ಷದ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನದಲ್ಲಿ 16 ಶಾಲೆಗಳ 700 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎರಡು ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಯಿತು.