ಬೆಂಗಳೂರು: ರಾಜಧಾನಿಯಲ್ಲಿ ಚಿತ್ರರಂಗದವರೇ ಸೇರಿ ನಿರ್ದೇಶಕನೊಬ್ಬನನ್ನು ಅಪಹರಿಸಿ, ಅಮಾನವೀಯವಾಗಿ ಹಲ್ಲೆ ನಡೆಸಿ ದೋಚಿದ ಕರಾಳ ಪ್ರಕರಣವೊಂದು ಬೆಳಕಿಗೆ ಬಂದಿದೆ. ʻಭರವಸೆಯೇ ಜೀವನ’ ಸೇರಿದಂತೆ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಅನೀಶ್ ಈ ಕೃತ್ಯಕ್ಕೆ ಬಲಿಯಾದವರು.

ಪ್ರಕರಣಕ್ಕೆ ಸಂಬಂಧಿಸಿ ʻಭೀಮಾ’ ಚಿತ್ರದ ನಟಿ ಐಶ್ವರ್ಯಾ, ಕಿಡ್ನ್ಯಾಪ್ ಸಂಚಿನ ಮಾಸ್ಟರ್ ಮೈಂಡ್ ಆಶೀರ್ವಾದ್, ಹಾಗೂ ಅವರ ಸಹಚರರಾದ ನಿತಿನ್, ವಿಜಯಕುಮಾರ್, ಶಿವರಾಜ್, ಮಂಜುನಾಥ್, ಕಿರಣ್, ಅಭಿಷೇಕ್, ಹರೀಶ್, ಸಂದೀಪ್ ಮತ್ತು ಗಿರೀಶ್ ಎಂಬವರನ್ನು ಬಂಧಿಸಲಾಗಿದೆ.

ಕೆಲವು ಆರ್ಥಿಕ ಕಾರಣಗಳಿಂದ ಸಿನಿಮಾ ಕೆಲಸ ನಿಲ್ಲಿಸಿ ಮುಂಬೈಗೆ ಸ್ಥಳಾಂತರಗೊಂಡಿದ್ದ ಅನೀಶ್ ಅವರನ್ನು, ಅವರ ಪರಿಚಯಸ್ಥರೇ ಆದ ನಟಿ ಐಶ್ವರ್ಯಾ (ದುನಿಯಾ ವಿಜಯ್ ನಟನೆಯ ʻಭೀಮಾ’ ಚಿತ್ರದ ನಟಿ) ಮೂಲಕ ಬೆಂಗಳೂರಿಗೆ ಬರಸೆಳೆಯಲಾಗಿತ್ತು. ತನ್ನ ಕಾರನ್ನು ಮಾರಾಟ ಮಾಡಲು ಮುಂದಾಗಿದ್ದ ಅನೀಶ್ ಅವರಿಗೆ ಕಾರು ಖರೀದಿಸುವ ನೆಪದಲ್ಲಿ ಐಶ್ವರ್ಯಾ ಸಂಪರ್ಕಿಸಿದ್ದರು. ಈ ಆಮಿಷಕ್ಕೆ ಒಳಗಾಗಿ ಫೆಬ್ರವರಿ 11ರಂದು ಬೆಂಗಳೂರಿನ ಆಡುಗೋಡಿಗೆ ಬಂದ ಅನೀಶ್ ಅವರನ್ನು ಪ್ರಮುಖ ಆರೋಪಿ ಆಶೀರ್ವಾದ್ ನೇತೃತ್ವದ 11 ಮಂದಿಯ ಗ್ಯಾಂಗ್ ಕಾರಿನಲ್ಲಿ ಅಪಹರಿಸಿದೆ.

ಅಪಹರಣದ ನಂತರ ಅನೀಶ್ ಅವರನ್ನು ಬ್ಯಾಡರಹಳ್ಳಿಯ ಮನೆಯೊಂದರಲ್ಲಿ ಕೂಡಿಹಾಕಿ, ಕ್ರಿಕೆಟ್ ಸ್ಟಂಪ್ ಹಾಗೂ ಹಾಕಿ ಸ್ಟಿಕ್‌ಗಳಿಂದ ಮೃಗೀಯವಾಗಿ ಹಲ್ಲೆ ನಡೆಸಲಾಗಿದೆ. ಸುಮಾರು ₹5 ಲಕ್ಷ ಹಣದ ಹಳೆಯ ಜಗಳವೇ ಈ ದ್ವೇಷಕ್ಕೆ ಕಾರಣವಾಗಿದ್ದು, ಹಲ್ಲೆಯ ಬಳಿಕ ಅನೀಶ್ ಅವರ ಬಳಿಯಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿದ ಆರೋಪಿಗಳು ಅವರನ್ನು ಮಧುಗಿರಿ ಸಮೀಪ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು.

ಘಟನೆಗೆ ಸಂಬಂಧಿಸಿದಂತೆ ಆಡುಗೋಡಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಟಿ ಐಶ್ವರ್ಯಾ ಸೇರಿದಂತೆ ಎಲ್ಲಾ 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಕೈಕಾಲು ಹಾಗೂ ಮೈತುಂಬಾ ಗಾಯಗಳಾಗಿರುವ ನಿರ್ದೇಶಕ ಅನೀಶ್ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಆರೋಪಿಗಳ ವಿಚಾರಣೆ ಮುಂದುವರಿಸಿದ್ದಾರೆ.
