ಶಾಸಕಿ ಭಾಗೀರಥಿ ಮುರುಳ್ಯಗೆ ‌ʻಶ್ರದ್ಧಾಂಜಲಿʼ ಪೋಸ್ಟ್‌ ಹಾಕಿದ ʻಬಿಲ್ಲವ ಸಂದೇಶ್ʼ ವಿರುದ್ಧ ಆಕ್ರೋಶ: ಬಿಜೆಪಿ ದೂರು

ಸುರತ್ಕಲ್: ಸುಳ್ಯ ಕ್ಷೇತ್ರದ ಶಾಸಕಿದ ಭಾಗೀರಥಿ ಮುರುಳ್ಯ ಅವರ ಭಾವಚಿತ್ರವನ್ನು ಬಳಸಿ, ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಲ್ಲದೆ ಅವರನ್ನು ವ್ಯಂಗ್ಯವಾಗಿ ನಿಂದಿಸಿ ಅವಹೇಳನ ಮಾಡುವ ರೀತಿಯ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.

ವೈರಲ್‌ ಪೋಸ್ಟ್

“ಬಿಲ್ಲವ ಸಂದೇಶ್” ಎಂಬ ಫೇಸ್‌ಬುಕ್ ಖಾತೆಯಿಂದ ಪ್ರಕಟಿಸಲಾದ ಪೋಸ್ಟ್‌ನಲ್ಲಿ “ದಲಿತ ಸಮುದಾಯದ ಶಾಸಕಿ ಭಾಗೀರಥಿ ಮುರುಳ್ಯಾ ಶೋಷಣೆಗೊಳಗಾದ ದಲಿತ ಸಮುದಾಯದ ಪರ ನಿಲ್ಲದೆ ಇಂದು ಎಲ್ಲರನ್ನು ಅಗಲಿ ತೆರಳಿದ್ದಾರೆ. ಇವರ ಅಗಲಿಕೆಯ ಶಕ್ತಿ ಬ್ಲೂಜೇಪಿ ಪಕ್ಷದ ಕಾರ್ಯಕರ್ತರಿಗೆ ದೇವರು ನೀಡಲಿ ಎಂದು ಹೇಳುತ್ತಾ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ” ಎಂಬ ಪೋಸ್ಟ್ ಬಿಜೆಪಿ ಕಾರ್ಯಕರ್ತರ ರೋಷಕ್ಕೆ ಕಾರಣವಾಗಿದೆ. ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ , ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್, ಶೇರ್, ಹಾಗೂ ಖಂಡನೆಗಳ ಮಹಾಪೂರವೇ ಹರಿದುಬರಲಾಂಭಿಸಿದೆ.

ಬಿಜೆಪಿ ಕೆಂಡಾಮಂಡಲ: ದೂರು

ಬಿಜೆಪಿ ಮಹಿಳಾ ಮೋರ್ಚಾ ಈ ಪ್ರಕರಣ ಸಂಬಂಧ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೋಸ್ಟ್ ಹಾಕಿದ ಆರೋಪಿಯನ್ನು ತ್ವರಿತವಾಗಿ ಬಂಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಲಾಗಿದೆ.

ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ವೇತಾ ಪೂಜಾರಿ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದು, ಬಂಟ್ವಾಳ ಮೂಲದ ಬಿಲ್ಲವ ಸಂದೇಶ್‌ ವಿರುದ್ಧ ಸುಮೊಟೋ ಕೇಸ್‌ ದಾಖಲಿಸಿ ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿದ್ದಾರೆ. 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ಶ್ವೇತಾ ಪೂಜಾರಿ ಹೇಳಿದ್ದಾರೆ. 

ಈ ವೇಳೆ ದಿನಕರ ಇಡ್ಯಾ, ಸುನಿಲ್‌ ಕುಳಾಯಿ, ವಿಠಲ್ ಸಾಲ್ಯಾನ್, ಸರಿತಾ ಶಶಿದರ್, ಅಶೋಕ್ ಶೆಟ್ಟಿ, ಶೋಭಾ ರಾಜೇಶ್, ಪವಿತ್ರಾ ನಿರಂಜನ್, ರಾಘವೇಂದ್ರ ಶಣೈ, ಯಶ್ಪಾಲ್ ಸಾಲ್ಯಾನ್, ಶೈಲಜಾ ಗಣೇಶ್ ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!