
ಚಾಮರಾಜನಗರ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾದ ಘಟನೆ ಬೆಂಡರವಾಡಿ ಸಮೀಪ ಬುಧವಾರ(ಜ.7) ರಾತ್ರಿ ನಡೆದಿದ್ದು, ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇರಸವಾಡಿ ಗ್ರಾಮದ ಮಂಜು ಮೃತ ಬಸ್ ಚಾಲಕ. ಕಾವುದವಾಡಿ ಹಾಗೂ ಬೇಡರಪುರ ಗ್ರಾಮದವರಾರದ ಶಿವಕುಮಾರ್, ಗೀತಾ, ನಿಂಗರಾಜು ಹಾಗೂ ಶಿವಕುಮಾರ್ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೈಸೂರಿನಿಂದ ಚಾಮರಾಜನಗರಕ್ಕೆ ಬರುತ್ತಿದ್ದ ಬಸ್ ಹಾಗೂ ಚಾಮರಾಜನಗರದಿಂದ ಮೈಸೂರಿಗೆ ಗ್ರಾನೈಟ್ ಕಲ್ಲುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿ ಬೆಂಡರವಾಡಿ ಗ್ರಾಮದ ಶಾಲೆಯ ಸಮೀಪ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬಸ್‌ನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಲಾರಿ ಚಾಲಕ ಸೇರಿ 17 ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಚಾಲಕನ ದೇಹ ವಾಹನದ ಬಿಡಿಭಾಗಗಳ ನಡುವೆ ಸಿಲುಕಿದ್ದರಿಂದ ದೇಹವನ್ನು ಹೊರತೆಗೆಯಲು ಪೊಲೀಸರು ಹಾಗೂ ಸಾರ್ವಜನಿಕರು ಹರಸಾಹಸ ಪಟ್ಟಿದ್ದಾರೆ. ಎರಡು ತಾಸು ಸಾವು–ಬದುಕಿನ ಮಧ್ಯೆ ಹೋರಾಟ ನಡೆಸಿ ಚಾಲಕ ಕೊನೆಯುಸಿರೆಳೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಅಪಘಾತದ ಪರಿಣಾಮ ಲಾರಿಯಲ್ಲಿ ತುಂಬಿದ್ದ ಗ್ರಾನೈಟ್‌ಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪಘಾತವಾದ ಕೂಡಲೇ ಸ್ಥಳಕ್ಕೆ ಬಂದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಹಾಗೂ ರಸ್ತೆಯ ಮೇಲೆ ಅಡ್ಡಲಾಗಿ ಬಿದ್ದಿದ್ದ ಗ್ರಾನೈಟ್ ತುಣುಕುಗಳನ್ನು ತೆರವುಗೊಳಿಸಲು ಸಹಾಯ ಮಾಡಿದರು.
ಬಸ್ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿದ ಸ್ಥಳಕ್ಕೆ ಬುಧವಾರ ಜಿಲ್ಲಾಧಿಕಾರಿ ಶ್ರೀರೂಪಾ ಭೇಟಿ ನೀಡಿ ಪರಿಶೀಲಿಸಿದರು. ಅಪಘಾತದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರ ಮಾಹಿತಿ ಪಡೆದುಕೊಂಡು ಜಿಲ್ಲಾಧಿಕಾರಿ ಬೆಂಡರವಾಡಿ ಗ್ರಾಮಸ್ಥರ ಬಳಿ ಮಾಹಿತಿ ಪಡೆದುಕೊಂಡರು. ಗ್ರಾಮಸ್ಥರ ದೂರಿನಂತೆ ಮುಂದೆ ಅಪಘಾತಗಳು ಸಂಭವಿಸಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶ್ರೀರೂಪಾ ಸೂಚನೆ ನೀಡಿದರು.