ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ರಾಮಲೀಲಾ ಮೈದಾನ ಪ್ರದೇಶದ ಮಸೀದಿ ಬಳಿ ನಡೆದ ಅತಿಕ್ರಮಣ ತೆರವು ಕಾರ್ಯಾಚರಣೆ ಹಿಂಸಾಚಾರಕ್ಕೆ ತಿರುಗಿದ್ದು, ಈ ವೇಳೆ ನಡೆದ ಕಲ್ಲು ತೂರಾಟದಲ್ಲಿ ಐವರು ಪೊಲೀಸರಿಗೆ ಗಾಯವಾಗಿರುವ ಘಟನೆ ಬುಧವಾರ ನಡೆದಿದೆ.

ದೆಹಲಿ ಹೈಕೋರ್ಟ್ ಆದೇಶದಂತೆ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಅಧಿಕಾರಿಗಳು ಸೈಯದ್ ಫೈಜ್ ಇಲಾಹಿ ಮಸೀದಿ ಮತ್ತು ತುರ್ಕಮನ್ ಗೇಟ್‌ನಲ್ಲಿರುವ ಹತ್ತಿರದ ಸ್ಮಶಾನಕ್ಕೆ ಹೊಂದಿಕೊಂಡಿರುವ ಭೂಮಿಯನ್ನು ಕೆಡವಲು ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಘರ್ಷಣೆಗಳು ಭುಗಿಲೆದ್ದಿದೆ. ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದು, ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಕಾರ್ಯಾಚರಣೆಗೆ ಸ್ಥಳೀಯ ನಿವಾಸಿಗಳು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಜಮಾಯಿಸಿ ಕಟ್ಟಡ ಕೆಡವುವುದನ್ನು ವಿರೋಧಿಸಿ ಪ್ರತಿಭಟಿಸಿದರು.
ಪರಿಸ್ಥಿತಿ ನಿಯಂತ್ರಣ ತಪ್ಪದಂತೆ ತಡೆಯಲು ಆ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ಸಾಕಷ್ಟು ಬಲಪ್ರಯೋಗ ಮಾಡಲಾಯಿತು. ಸ್ಥಳೀಯರೊಂದಿಗೆ ಸಮನ್ವಯ ಸಭೆಗಳನ್ನು ನಡೆಸಲಾಯಿತು. ಸ್ವಲ್ಪ ಸಮಯದ ನಂತರ ಪರಿಸ್ಥಿತಿ ತಿಳಿಗೊಂಡಿದು. ತೆರವು ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಭದ್ರತೆಗಾಗಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗಿನ ಜಾವ 1 ಗಂಟೆ ಸುಮಾರಿಗೆ ಕಾರ್ಯಾಚರಣೆ ಪ್ರಾರಂಭವಾಯಿತು. ಹೈಕೋರ್ಟ್ ಆದೇಶದಂತೆ ಅತಿಕ್ರಮಣಗೊಂಡ ಭೂಮಿಯನ್ನು ಎಂಸಿಡಿ ಧ್ವಂಸಗೊಳಿಸಿತು. ರಾತ್ರಿಯಲ್ಲಿ ಪೊಲೀಸರ ಮೇಲೆ ಕಲ್ಲುಗಳನ್ನು ಎಸೆಯಲಾಗಿದೆ ಎಂದು ಹೇಳಿದ್ದಾರೆ.

ಘಟನೆಯಲ್ಲಿ 4-5 ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಮತ್ತು ಬಾಡಿ ಕ್ಯಾಮೆರಾ ದೃಶ್ಯಗಳನ್ನು ಪಡೆದ ತಕ್ಷಣ, ನಾವು ದುಷ್ಕರ್ಮಿಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.